HomeBreaking NewsLatest NewsPoliticsSportsCrimeCinema

ತಾಲ್ಲೂಕು, ಜಿಲ್ಲಾ ಪಂಚಾಯತಿ  ಹಾಗೂ ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ

02:39 PM May 24, 2024 IST | mahesh

 

ಮೈಸೂರು, ಮೇ 24, 2024:  ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ  ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ  ಚುನಾವಣೆ ನಡೆಸಲು ಸಿದ್ಧ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ತಮ್ಮ ನಿವಾಸದ ಬಳಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣಾ ಆಯೋಗ ಉಚ್ಚ ನ್ಯಾಯಾಲಯಕ್ಕೆ ಹೋಗಲಿರುವ ಬಗ್ಗೆ  ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಕ್ಷೇತ್ರ ಪುನರ್ವಿಗಂಡನೆಗೆ ಜನವರಿವರೆಗೆ ಗಡುವು ಇದ್ದುದರ ಬಗ್ಗೆ ಮಾತನಾಡಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕು ಎಂದರು.

ಹೈಕಮಾಂಡ್ ನಿರ್ಧಾರದ ಬಗ್ಗೆ ತಿಳಿದಿಲ್ಲ :

ಈ ಬಾರಿ ಡಾ: ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯ ರನ್ನಾಗಿಸಲು  ಒತ್ತಡವಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹೈ ಕಮಾಂಡ್ ನವರು ಯತೀಂದ್ರ ಅವರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು. ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಹೋದ ಬಾರಿ ನಾನು ವರುಣಾದಲ್ಲಿಯೇ ನಿಲ್ಲಬೇಕು ಎಂದು ತೀರ್ಮಾನವಾದಾಗ ಕ್ಷೇತ್ರ ಬಿಟ್ಟುಕೊಡಲು ಸೂಚಿಸಿದ್ದರು. ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ ಎಂದರು.

ಪ್ರಕರಣ ದುರ್ಬಲಗೊಳಿಸಲು ಹೇಳಿಕೆ :

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ  ಡಿ.ಕೆ.ಶಿವಕುಮಾರ್ ಅವರ ಆಡಿಯೋ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ,  ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು  ಡಿ.ಕೆ. ಶಿವಕುಮಾರ್  ಹಾಗೂ ಮತ್ತೊಬ್ಬರ ಮೇಲೆ  ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು.  ಅಣ್ಣನ ಮಗ ಅಪರಾಧಿಯಲ್ಲ  ಆರೋಪಿ ಅಷ್ಟೇ ಎಂದಿದ್ದಾರೆ, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ  ನಾನೂ ಕೂಡ ಆರೋಪಿ ಎಂದೇ   ಹೇಳಿದ್ದೇನೆ ಎಂದರು.

ನಂಬಿರುವುದು ನಿಮ್ಮ ತಪ್ಪು :

ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದತಿಗೆ ಮೋದಿಯವರಿಗೆ ಪತ್ರ ಬರೆದಿದ್ದು  ಈವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದರು. ಎಲ್ಲರಿಗೂ ಪ್ರಧಾನಮಂತ್ರಿಗಳ ಕಚೇರಿಯಿಂದ ಕೂಡಲೇ ಉತ್ತರ ದೊರಕುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹಾಗಂತ ನಂಬಿರುವುದೇ ನಿಮ್ಮ ತಪ್ಪು ಎಂದರು.

ನಾವು ಬರೆದಿರುವ  ಅನೇಕ ಪತ್ರಗಳಿಗೆ ಅವರು ಉತ್ತರ ಕೊಟ್ಟಿಲ್ಲ. ಮೋದಿಯವರು ಸೆಲೆಕ್ಟಿವ್ ಎಂದು ಹೇಳುವುದಿಲ್ಲ ಎಂದರು.

ಪಿಎಂಒ ಉತ್ತರ ಕೊಡುತ್ತಾರೆ ಎಂಬ  ನಂಬಿಕೆ ಇದೆ :

ಚುನಾಯಿತ ಸರ್ಕಾರದ ಮುಖ್ಯಮಂತ್ರಿ ಪ್ರಧಾನಿಗಳಿಗೆ ಪತ್ರ ಬರೆದಾಗ  ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎಂಬ  ನಂಬಿಕೆ ಇದೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು  ಬರೆದ  ಮೊದಲ ಪತ್ರಕ್ಕೆ  ಉತ್ತರ ಕೊಟ್ಟಿಲ್ಲ. ಎರಡನೇ ಪತ್ರಕ್ಕೆ ಉತ್ತರ  ಕೊಡುತ್ತಾರೆನೋ ನೋಡೋಣ ಎಂದರು.

ಬಿಜೆಪಿ ಯವರನ್ನು ಪ್ರಶ್ನಿಸಿ :

ಚುನಾವಣಾ ಫಲಿತಾಂಶಕ್ಕಾಗಿ ಇದನ್ನು ವಿಳಂಬ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಈ ಪ್ರಶ್ನೆಯನ್ನು ಬಿಜೆಪಿಯ ಪ್ರಹ್ಲಾದ್ ಜೋಶಿ ಅವರನ್ನು  ಕೇಳಿ ಎಂದರು.

ಮನೆಯವರಿಗೆ ಹೇಳದೆ ವಿದೇಶಕ್ಕೆ  ತೆರಳಿದರೇ :

ದೇವೇಗೌಡರು ಪ್ರಜ್ವಲ ರೇವಣ್ಣ ಅವರನ್ನು ಕುಟುಂಬದಿಂದ ಹೊರಹಾಕುತ್ತೇವೆ ಎಂದಿರುವ ಬಗ್ಗೆ ಮಾತನಾಡಿ ಇವರಿಗೆ ಗೊತ್ತಿಲ್ಲದೆ ಪ್ರಜ್ವಲ ರೇವಣ್ಣ ಹೊರಟು ಹೋಗಿದ್ದಾರಾ?

ಪ್ರಚಾರಕ್ಕೆ ಏಕೆ ಹೋಗಿದ್ದರು :

ಕುಮಾರಸ್ವಾಮಿ ಅವರು ಮೊದಲಿನಿಂದಲೂ ಪ್ರಜ್ವಲ್ ರೇವಣ್ಣ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಹಾಗಾದರೆ ನನ್ನ ಮಗ ಎಂದು ಮತ ನೀಡಲು ಪ್ರಚಾರ ಮಾಡಿದ್ದು ಸಂಪರ್ಕವೂ, ಅಲ್ಲವೋ ಎಂದು ಪ್ರಶ್ನಿಸಿದರು.

ಪ್ರಕರಣದ ಬಗ್ಗೆ ಗಮನ ಕೇಂದ್ರೀಕರಿಸಲು ಎಸ್.ಐ.ಟಿ ರಚನೆ:

ಎಸ್.ಐ.ಟಿ ತನಿಖೆ ತಾತ್ವಿಕ ಅಂತ್ಯ ಪಡೆಯುವುದಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಮಾತನಾಡಿ ನಮಗೆ ಎಸ್.ಐ.ಟಿ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕುಮಾರಸ್ವಾಮಿ ಕಾಲದಲ್ಲಿ ಎಷ್ಟು ಪ್ರಕರಣಗಳನ್ನು ಎಸ್ .ಐ.ಟಿ ಗೆ ವಹಿಸಿದ್ದಾರೆ ಎನ್ನುವ ಬಗ್ಗೆ  ನನಗೆ ತಿಳಿದಿಲ್ಲ. ಎಸ್.ಐ.ಟಿ ರಚನೆ ಮಾಡುವುದು  ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಎಂದರು.

ಪರಿಶೀಲನೆ :

ಕಾವೇರಿ ನದಿ ಮಲಿನವಾಗುತ್ತಿದೆ ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕೆಲವು ಕಡೆ ಕೈಗಾರಿಕೆಗಳಿಂದ ಬಿಡುವ ನೀರಿನಿಂದ ಮಲಿನವಾಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

KEY WORDS: Mysore, Siddaramaiah, local body, election, government, ready

Tags :
electiongovernmentlocal bodyready
Next Article