For the best experience, open
https://m.justkannada.in
on your mobile browser.

ಲೋಕಸಭಾ ಚುನಾವಣೆ: ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದ ಹೆಜ್ಜೆ ಗುರುತುಗಳ ಪಕ್ಷಿನೋಟ ಹೀಗಿತ್ತು..

11:08 AM May 10, 2024 IST | prashanth
ಲೋಕಸಭಾ ಚುನಾವಣೆ  ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದ ಹೆಜ್ಜೆ ಗುರುತುಗಳ ಪಕ್ಷಿನೋಟ ಹೀಗಿತ್ತು

ಬೆಂಗಳೂರು,ಮೇ,10,2024 (www.justkannada.in): ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಜೂನ್ 1ರವರೆಗೆ ಮತದಾನವಾಗಿ ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಕರ್ನಾಟಕದಲ್ಲಿ ಎರಡು ಹಂತಗಳ ಚುನಾವಣೆ ಈಗಾಗಲೇ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದಕ್ಕೂ ಮುನ್ನ ಉಭಯ ಪಕ್ಷಗಳ ಪ್ರಚಾರದ ಭರಾಟೆ, ಆರೋಪ ಪ್ರತ್ಯಾರೋಪ, ವಾಗ್ಯುದ್ಧದಿಂದ ಕೂಡಿತ್ತು.  ಅದರಲ್ಲೂ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಭಾಷಣದಲ್ಲೇ ಅಟ್ಯಾಕ್ ಮಾಡುತ್ತಿದ್ದರು.  ಹಾಗಾದರೇ ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದ ಹೆಜ್ಜೆ ಗುರುತುಗಳ ಒಂದು ಪಕ್ಷಿನೋಟ ನೋಡೋಣ ಬನ್ನಿ.

ಸಿಎಂ ಸಿದ್ದರಾಮಯ್ಯ ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನ‌ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು.  ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋಮೀಟರ್ ಸಂಚಾರ, ಸರಾಸರಿ 15 ಸಾವಿರ ಮಂದಿ ಮುಖ್ಯಮಂತ್ರಿಗಳ ರೋಡ್ ಶೋ/ಸಭೆಗಳಲ್ಲಿ ಭಾಗಿಯಾಗಿದ್ದರು.

ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸರಾಸರಿ ದಿನಕ್ಕೆ 14-18 ಗಂಟೆ (ಆರೋಗ್ಯದಲ್ಲಿ ತೀವ್ರ ಸ್ವರೂಪದ ವ್ಯತ್ಯಾಸ ಆದಾಗಲೂ) ಪ್ರತೀ ದಿನ ಶ್ರಮಿಸಿದ್ದಾರೆ (ರಸ್ತೆ ಮಾರ್ಗ/ವಾಯು ಮಾರ್ಗದ ಪ್ರಯಾಣದ ಅವಧಿಯನ್ನೂ ಸೇರಿಸಿ)

ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಎಲ್ಲಾ ಸಮಾವೇಶಗಳಲ್ಲೂ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮ್ಮದೇ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದ್ದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ (ಜನಪರ) ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು ಪರಿಣಾಮಕಾರಿಯಾಗಿತ್ತು.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ "ಪ್ರಜಾಧ್ವನಿ-2" ಜನ ಸಮಾವೇಶಗಳಲ್ಲಿ ಹೈವೋಲ್ಟೇಜ್ ಭಾಷಣಗಳ ಮೂಲಕ ರಾಜ್ಯದ ಜನರಿಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟುವಂತೆ ಅರ್ಥ ಮಾಡಿಸಿದ್ದಕ್ಕೆ ನಾವುಗಳು ಸಾಕ್ಷಿಯಾದವು

ಬಿಜೆಪಿ ಕೇವಲ ಭಾರತೀಯರ ಭಾವನೆಗಳನ್ನು ಕೆರಳಿಸಿ ಬಕ್ರಾ ಮಾಡುತ್ತಿದೆ. ಕಾಂಗ್ರೆಸ್ ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಭರವಸೆಗಳನ್ನು ನೀಡುತ್ತಿದೆ ಎನ್ನುವ ಮುಖ್ಯಮಂತ್ರಿಗಳ ಮಾತಿಗೆ ಮನಸೋತು, ಮಾನ್ಯತೆ ಕೊಟ್ಟ ಮತದಾರರು

ಪ್ರಜಾಧ್ವನಿ ಜನ-ಸಮಾವೇಶದ ಇತರೆ ಹೈಲೈಟ್ಸ್ ಗಳು

1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆ ಜನ ಕುಳಿತಲ್ಲಿಂದ ಮೇಲೆದ್ದು ಎರಡೂ ಕೈಗಳನ್ನು ಮೇಲೆತ್ತಿ, ಅವರ ಮಾತಿಗೆ  ಸಮ್ಮತಿ ಸೂಚಿಸುತ್ತಿದ್ದರು

2)ಕಪ್ಪು ಮುಖ-ಬೆಳ್ಳಿ ಗಡ್ಡದ ಜನರ ಬಾಯಲ್ಲಿ ಅಂಬಾನಿ-ಅದಾನಿ: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಗೆ ಎಂಥಾ ದುಸ್ಥಿತಿ ತಂದಿಟ್ಟರು ಎನ್ನುವುದನ್ನು ವಿವರಿಸುವಾಗ ಪ್ರತೀ ಸಭೆಗಳಲ್ಲೂ ರೊಚ್ಚಿಗೆದ್ದ ಜನರ ಬಾಯಲ್ಲಿ ಅಂಬಾನಿ-ಅದಾನಿ ಹೆಸರು ಪ್ರಸ್ತಾಪವಾಗುತ್ತಿದ್ದದ್ದು ವಿಶೇಷವಾಗಿತ್ತು. ಇದು ಮಾತ್ರ ಚಾಮರಾಜನಗರದಿಂದ ಬೀದರ್ ವರೆಗೂ ಜನರಿಂದ ವ್ಯಕ್ತವಾಗುತ್ತಿದ್ದ ಸಾಮಾನ್ಯ ವಿದ್ಯಮಾನವಾಗಿತ್ತು

3)ಖಾಲಿ ಚೊಂಬಿಗೆ ಭರ್ಜರಿ ಟಿಆರ್ ಪಿ: ಮಾನ್ಯ ಮುಖ್ಯಮಂತ್ರಿಗಳ ನಾಟಿ ಶೈಲಿಯ ಭಾಷಣಗಳಲ್ಲಿ ಅರ್ಥಪೂರ್ಣವಾದ ಹಾಸ್ಯವೂ ಮೇಳೈಸಿದ್ದರಿಂದ ರಾಜ್ಯದ ಜನತೆಗೆ ಮನರಂಜನೆಯೂ ಸಿಕ್ಕಿತ್ತು. ಹತ್ತು ವರ್ಷಗಳಲ್ಲಿ ಮೋದಿ ನಿಮ್ಮ ಕೈಗೆ ಏನು ಕೊಟ್ಟರು ಎಂದರು ಜನರೆಡೆಗೆ ಬೆರಳು ಮಾಡಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರೆ, ನೆರೆದಿದ್ದ ಜನತೆ  "ಖಾಲಿ ಚೊಂಬು" ಎಂದು ಕೂಗುತ್ತಿದ್ದರು.

4) ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಕೊಟ್ಟ ಭಾಗ್ಯಗಳನ್ನು ಒಂದೊಂದಾಗಿ ಹೆಸರಿಸುತ್ತಾ...ಅನ್ನಭಾಗ್ಯ ಕೊಟ್ಟಿದ್ದು ಯಾರು ? ಎಂದು ಕೇಳುತ್ತಿದ್ದರು. ಜನತೆ ಸಿದ್ದರಾಮಯ್ಯ ಎಂದು ಕೂಗುತ್ತಿದ್ದರು. ಇದೇ ರೀತಿ ಒಟ್ಟು 18-20 ಭಾಗ್ಯಗಳನ್ನು ಹೆಸರಿಸಿದರೆ ಅಷ್ಟೂ ಬಾರಿ ಜನ ಸಿದ್ದರಾಮಯ್ಯ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಿದ್ದದ್ದರಿಂದ ಇಡೀ ಸಭೆಯಲ್ಲಿ ವಿದ್ಯುತ್ ಸಂಚಾರ ಆದಂತೆ ಭಾಸವಾಗುತ್ತಿತ್ತು.

5) ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ‌ ನೆತ್ತಿ ಸುಡುವ ಬಿಸಿಲಿನಲ್ಲೂ ಮಧ್ಯಾಹ್ನದ ವೇಳೆಯಲ್ಲೂ ಕಪ್ಪು ಮುಖ ಬೆಳ್ಳಿ ಗಡ್ಡದ ತಲೆಗೆ ಟವೆಲ್ ಸುತ್ತಿದ ಗಂಡಸರು, ಸೆರಗು ತಲೆಗೆ ಸುತ್ತಿಕೊಂಡ ಮಹಿಳೆಯರು ಗಂಟೆಗಟ್ಟಲೆ ಕಾದು ಭಾಷಣ ಕೇಳುತ್ತಿದ್ದದ್ದು, ಭಾಷಣಕ್ಕೆ ಸ್ಪಂದಿಸುತ್ತಿದ್ದದ್ದನ್ನು ನೋಡಿದಾಗಲೇ ಈ ಬಾರಿ ಮತದಾನ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗುವ ಭರವಸೆ ವ್ಯಕ್ತವಾಗಿತ್ತು.

6) ಮುಖ್ಯಮಂತ್ರಿಗಳು ಮೋದಿಯವರ "ಅಚ್ಛೇ ದಿನ್ ಆಯೇಂಗೆ" ಎನ್ನುವ ಸುಳ್ಳು ಭರವಸೆಯನ್ನು ಲೇವಡಿ ಮಾಡುವಾಗ ದೀರ್ಘವಾಗಿ "ಅಚ್ಚೆಏಏಏಏಏ ದಿನ್ ಆಯೇಂಗೇ" ಎಂದು ರಾಗ ಎಳೆಯುತ್ತಿದ್ದರೆ, ಸಭೆಯಲ್ಲಿದ್ದ ಜನರೂ ಕೂಡ ರಾಗವಾಗಿ ಕೋರಸ್ ಕೊಡುತ್ತಿದ್ದದ್ದು ಮಜವಾಗಿತ್ತು.

8) ದೇಹದ ನೀರನ್ನೆಲ್ಲಾ ಹೀರುವ ಸುಡು ಬಿಸಿಲಿನಲ್ಲೇ 74 ಪ್ರಜಾಧ್ವನಿ ಜನ‌ಸಮಾವೇಶಗಳು ನಡೆದರೆ ಹಾವೇರಿ ಮತ್ತು ದಾವಣಗೆರೆ ಜನ ಸಮಾವೇಶಗಳಲ್ಲಿ ಮಾತ್ರ ತುಂತುರು ಹನಿಯ ಜತೆಗೆ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಮೇ5 ರಂದು ತೆರೆ ಬಿತ್ತು.

ಗಮನಿಸಬೇಕಾದ ಅತ್ಯಂತ ಪ್ರಮುಖ ಸಂಗತಿಗಳು...

14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿಗಳು ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು ಬರೋಬ್ಬರಿ 20 ರಿಂದ 26 ಸಾವಿರ ಕಿಲೋಮೋಟರ್.  (ಮುಖ್ಯಮಂತ್ರಿಗಳ ಮಾಧ್ಯಮ ತಂಡದ ಎರಡು ವಾಹನಗಳು ಪ್ರಯಾಣಿಸಿದ ಕಿಲೋಮೀಟರ್ ಆಧಾರದಲ್ಲಿ)  ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60  ಸಾವಿರದವರೆಗೂ ಜನ ಸೇರಿದ್ದರು.

ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿಗಳು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ

ಪ್ರಧಾನಿ ನರೇಂದ್ರ ಮೋದಿಯವರು ಯಥಾ ಪ್ರಕಾರ ತಮ್ಮ ಸುಳ್ಳು ಭಾಷಣದಲ್ಲಿ, "ರಾಹುಲ್ ಗಾಂಧಿಯವರಿಗೆ ಅಂಬಾನಿ-ಅದಾನಿ ತಮ್ಮ ಬ್ಲಾಕ್‌ ಮನಿಯನ್ನು ಟೆಂಪೋಗಳಲ್ಲಿ ತುಂಬಿ ಕಳುಹಿಸಿದ್ದಾರಾ? ಅದಕ್ಕೇ ಇವರು ಅಂಬಾನಿ-ಅದಾನಿಯನ್ನು ಟೀಕಿಸುವುದನ್ನೇ ನಿಲ್ಲಿಸಿದ್ದಾರಾ? ಎಂದು ಆರೋಪಿಸಿದ್ದಾರೆ. ಇದು ಅಪ್ಪಟ ಸುಳ್ಳು. ಏಕೆಂದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಗಾಂಧಿ ರಾಜ್ಯದಲ್ಲಿ ನಡೆಸಿದ ಪ್ರತೀ ಚುನಾವಣಾ ಪ್ರಚಾರದಲ್ಲೂ, " ಭಾರತೀಯರ ಹಣ ಮತ್ತು ಭಾರತ ದೇಶದ ಸಂಪತ್ತು ಹೇಗೆ ಅಂಬಾನಿ-ಅಂದಾನಿಯ ಖಾಸಗಿ ಸ್ವತ್ತಾಗಿ ಪರಿವರ್ತನೆ ಆಗಿದೆ ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ  ತಮ್ಮದೇ ಶೈಲಿಯಲ್ಲಿ ಸಿಎಂ ಸಿದ್ದರಾಮಯ್ಯ ಜನತೆಗೆ ವಿವರಿಸಿದ್ದಾರೆ.

Key words: LokSabha, Elections, CM Siddaramaiah, campaign

Tags :

.