ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಲು ಪ್ರಭಾವಿಗಳೇ ಕೆಲಸ ಮಾಡಿದ್ದಾರೆ –ಎಂ.ಲಕ್ಷ್ಮಣ್
ಮೈಸೂರು,ಆಗಸ್ಟ್,17,2024 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಿಂದ ಅನುಮತಿ ಕೊಡಿಸಲು ಪ್ರಭಾವಿಗಳೇ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ, ಅಶೋಕ್ ಪ್ರಭಾವ ಬಳಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಬೆನ್ನಲ್ಲೇ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿಜೆ ವಿಜಯ್ ಕುಮಾರ್, ಆರ್ ಮೂರ್ತಿ, ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಯಾವಾಗ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ಬಿಜೆಪಿ ನಾಯಕರು ಸಿಎಂ ಕೆಳಗಿಳಿಸಲಿಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡಿದರು. ರಾಜಭವನವನ್ನ ಬಿಜೆಪಿ, ಜೆಡಿಎಸ್ ಕಚೇರಿ ಮಾಡಿಕೊಂಡಿರೋದು ದುರ್ದೈವ. ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲು ಮಾಡಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹೀಗಿದ್ದರೂ ಕೂಡ ರಾಜ್ಯಪಾಲರು ಅನುಮತಿ ನೀಡಿಲ್ಲ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಆರೋಪ ಇದೆ. ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೇಳಿದರೂ ರಾಜ್ಯಪಾಲರು ನೀಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಟಿ. ಜೆ ಅಬ್ರಹಾಂ ಸಿಎಂ ವಿರುದ್ಧ ದೂರು ಕೊಟ್ಟ ಕೆಲವೇ ಕ್ಷಣಗಳಲ್ಲಿ ಸಿಎಂ ಗೆ ನೋಟಿಸ್ ನೀಡಲಾಗುತ್ತದೆ. ಇಂದು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಸಿಎಂ ವಿರುದ್ಧ ದೂರು ಕೊಟ್ಟೋರೋದು ಯಾರು. ದಾರಿಯಲಿ ಹೋಗೋರು ಕೊಟ್ಟ ದೂರನ್ನ ಕಾಂಪಿಟೆಟಿವ್ ಅಥಾರಿಟಿ ಮಾಡಲಾಗಿದೆ. ರಾಜ್ಯಪಾಲರು ಬಿಜೆಪಿ, ಜೆಡಿಎಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಲು ಪ್ರಭಾವಿಗಳು ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ, ಅಶೋಕ್ ಪ್ರಭಾವ ಬಳಸಿದ್ದಾರೆ. ನೆಕ್ಸ್ಟ್ ಡಿಸಿಎಂ ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಲಾಗಿದೆ. ಅಧಿಕಾರದ ದಾಹದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ಪಕ್ಷದ ಹುನ್ನಾರವನ್ನು ಜನ ಅರಿತುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಮುಂದಾಗಿದೆ. ಬಿಜೆಪಿ, ಜೆಡಿಎಸ್ ಹುನ್ನಾರ ಫಲಿಸಲ್ಲ. ನಾವು ಇನ್ನು ಸ್ಟ್ರಾಂಗ್ ಆಗುತ್ತೇವೆ. ರಾಜ್ಯಾದ್ಯಂತ ನಮ್ಮ ಪ್ರತಿಭಟನೆಗಳು ಪ್ರಾರಂಭ ಆಗುತ್ತದೆ. ಕೆಲವರು ಕಾಂಗ್ರೆಸ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಇಂತಹ ಪ್ರತಿಭಟನೆಗಳಿಗೆ ಕಾಂಗ್ರೆಸ್ ಹೊಣೆಯಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದರು.
Key words: M. Laxman, Influence, permission, prosecution, CM