HomeBreaking NewsLatest NewsPoliticsSportsCrimeCinema

ಫೆ.28ರೊಳಗೆ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕ ಹಾಕುವುದು ಕಡ್ಡಾಯ- ಗಡುವು ನೀಡಿದ ಸಿಎಂ ಸಿದ್ದರಾಮಯ್ಯ.

03:38 PM Dec 28, 2023 IST | prashanth

ಬೆಂಗಳೂರು,ಡಿಸೆಂಬರ್,28,2023(www.justkannada.in):  ವಾಣಿಜ್ಯ ಮಳಿಗೆಗಳು , ಅಂಗಡಿಗಳಲ್ಲಿ ಫೆಬ್ರವರಿ 28ರೊಳಗೆ ಶೇ.60 ರಷ್ಟು ಕನ್ನಡ ಭಾಷೆಯ  ನಾಮಫಲಕ ಹಾಕುವುದು ಕಡ್ಡಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಈ ಸಂಬಂಧ ಇಂದು ಸಭೆ ನಡೆಸಿದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ, ಆಡಳಿತ ಭಾಷೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರುವರಿ 28 ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು . ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ ಎಂದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6) ರ ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಸುತ್ತಿರುವ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ . ಇದಕ್ಕೂ ಮೊದಲು 2018 ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ನಾಮಫಲಕದಲ್ಲಿ ಶೇ. 60 ಕನ್ನಡ ಭಾಷೆ ಹಾಗೂ ಶೇ. 40 ರಷ್ಟು ಇತರ ಭಾಷೆಯಲ್ಲಿರಬಹುದು ಎಂದು ತಿಳಿಸಲಾಗಿದೆ. ಇದರಂತೆಯೇ ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರುವರಿ 28 ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರತಕ್ಕದ್ದು ಎಂದು ತಿಳಿಸಲಾಗಿದೆ ಇದನ್ನು ಸಹ ಅನುಷ್ಠಾನಗೊಳಿಸಲಾಗುವುದು.  ಈ ಕಾಯ್ದೆಯ ಅಧಿಸೂಚನೆ ಹೊರಡಿಸಲು ಹಾಗೂ ನಿಯಮಗಳನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ

3-3-2022ರಲ್ಲಿ ಕರ್ನಾಟಕ ಉಚ್ಛನ್ಯಾಯಾಲಯವು ಪ್ರತಿಭಟನೆಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾತ್ರ ನಡೆಸಬೇಕು. ರಾಜ್ಯ ಸರ್ಕಾರವು ಇದನ್ನು ಖಾತರಿಪಡಿಸಬೇಕು ಎಂದು ಸ್ಪಷ್ಟವಾದ ಆದೇಶ ಹೊರಡಿಸಿದೆ . ರಾಜ್ಯದ ಹಿತದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರಾದರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿವರೆಗೆ ಎಲ್ಲರೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

Key words: mandatory - 60% Kannada language -nameplates -February 28- CM -Siddaramaiah

Tags :
CMmandatory - 60% Kannada languagenameplates -February 28Siddaramaiah
Next Article