For the best experience, open
https://m.justkannada.in
on your mobile browser.

ಜು.15 ರಂದು ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ

04:06 PM Jul 12, 2024 IST | prashanth
ಜು 15 ರಂದು ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ

ಮೈಸೂರು, ಜುಲೈ,12,2024 (www.justkannada.in): ನಾಗರಿಕ ಸಮಾಜದಲ್ಲಿ ಗೌರವದ ಬದುಕು ಸಾಗಿಸಲು ಕನಿಷ್ಠ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಜು.15ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು, ಅಂದು ಬೆಳಗ್ಗೆ 9.30ಕ್ಕೆ ರಿಂಗ್ ರಸ್ತೆಗೆ ತಾಕಿಕೊಂಡಂತಿರುವ ಮಾನಸಿನಗರ ಹಾಗೂ ಕೆಎಸ್‌ ಎಫ್‌ಸಿ ಬಡಾವಣೆಯ ವಿನಾಯಕ ಉದ್ಯಾನವನದಿಂದ ಪಾದಯಾತ್ರೆ ಅರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ, ನಂತರ ಸಮಾವೇಶಗೊಂಡು, ತದನಂತರ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ನಗರಿ ಹಾಗೂ ನಿವೃತ್ತರ ಸ್ವರ್ಗ ಎಂಬ ಖ್ಯಾತಿವೆತ್ತ ಮೈಸೂರು ನಗರ ಇಂದು ನಾನಾ ಕಾರಣಗಳಿಗಾಗಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನಮಾನ ಗಳಿಸಿದೆ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ನಂತರದ ಸ್ಥಾನದಲ್ಲಿರುವ ಮೈಸೂರು ನಗರ ಇಂದು ಬೆಳೆಯುತ್ತಿರುವ ಎರಡನೇ ಹಂತದ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವುದು ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಮೈಸೂರು ನಗರವನ್ನು ಭವಿಷ್ಯದ ದಿನಗಳಲ್ಲಿ ಕಾಡಲಿರುವ ಸಮಸ್ಯೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ರಚನಾತ್ಮಕ ಕಾರ‍್ಯಕ್ರಮ ರೂಪಿಸಿದ್ದು, ಅದರ ಭಾಗವಾಗಿ ಮಾಲಿನ್ಯ ರಹಿತ ಗಾಳಿ, ಕಸಮುಕ್ತ ಬದುಕು, ಸ್ವಚ್ಛ ಹಾಗೂ ಸುಂದರ ಪರಿಸರ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಗುರಿಯಾಗಿರಿಸಿಕೊಂಡು ಒಂದಷ್ಟು ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರದ ಗಮನ ಸೆಳೆಯುವ ‍ ಕಾರ್ಯಕ್ರಮ ರೂಪಿಸಿದೆ ಎಂದರು.

ಯೋಜನೆಗಳ ಮೊದಲ ಭಾಗವಾಗಿ ಹಾಗೂ ಮೊದಲ ಹೋರಾಟದ ಭಾಗವಾಗಿ ಇದೇ ಜುಲೈ 15ರಂದು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಹೋರಾಟವೊಂದನ್ನು ರೂಪಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ ಪ್ರತೀ ಬಡಾವಣೆಯಿಂದ 20 ಮಂದಿ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಲಿದ್ದು, ಅಂದಾಜು 500ಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾವೇರಿ ಹಾಗೂ ಕಪಿಲಾ ನದಿ ಮೈಸೂರಿಗೆ ಮಗ್ಗುಲಲ್ಲೇ ಇದ್ದರೂ ಮೈಸೂರು ನಗರದ ಹಲವು ಬಡಾವಣೆಗಳು ಇಂದು ಕಾವೇರಿ ನೀರಿನಿಂದ ವಂಚಿತವಾಗಿವೆ. ಚಾಮುಂಡಿ ಬೆಟ್ಟ ಮೈಸೂರಿನ ಹೃದಯ ಭಾಗದಲ್ಲಿದ್ದರೂ ಪ್ರಕೃತಿಗಾಗಿ ಪರಿತಪಿಸುವಂತಾಗಿದೆ. ಮೈಸೂರು ಸುತ್ತಮುತ್ತ ಕಬಿನಿ, ಕೆಆರ್‌ಎಸ್, ಹಾರಂಗಿ ಅಣೆಕಟ್ಟೆಯಿದ್ದರೂ ಬೋರ್‌ ವೆಲ್ ನೀರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿ ನಮ್ಮ ನಾಗರೀಕ ಸಮಾಜ ಇದೆ. ಈ ರೀತಿಯ ಹತ್ತು ಹಲವು ಅಂಶಗಳು ಇಂದು ನಾಗರಿಕ ಸಮಾಜದ ಮೇಲೆ ಸವಾರಿ ಮಾಡುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಹೋರಾಟ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದೆಲ್ಲವನ್ನೂ ಮನಗಂಡೇ ಮೈಸೂರು ನಗರದ ಪೂರ್ವಭಾಗದಲ್ಲಿರುವ ಹೊರವರ್ತುಲ ರಸ್ತೆ ನಂತರದ ಸುಮಾರು 30 ಬಡಾವಣೆಗಳಲ್ಲಿರುವ ಸಂಘಟನೆಗಳು ಒಗ್ಗೂಡಿ ಇಂದು "ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ" ರಚನೆಯಾಗಿದೆ ಎಂದ ಅವರು, ನಾಗರಿಕ ಸಮಾಜಕ್ಕೆ ಮೂಲಸೌಕರ್ಯವೇ ಆಭರಣ. ಅದನ್ನು ಅನುಷ್ಠಾನಗೊಳಿಸುವಲ್ಲಿ ಬಡಾವಣೆಯ ನಿರ್ಮಾಣಕಾರರು ಹಾಗೂ ಆಳುವ ಸರ್ಕಾರಗಳು ತೋರಿದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಇಂದು ನಾಗರಿಕರು ಪರಿತಪಿಸುವಂತಾಗಿದೆ. ಅವರೆಲ್ಲರ ಪ್ರಾತಿನಿಧಿಕವಾಗಿ ಒಕ್ಕೂಟ ಇಂದು ಬೃಹತ್ ಪ್ರಮಾಣದ ಹೋರಾಟಕ್ಕೆ ಕರೆ ನೀಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎಚ್.ಚೆಲುವೇಗೌಡ, ಕಾರ್ಯದರ್ಶಿ ಎಲ್.ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್.ಅರುಣ್ , ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ.ಕೃಷ್ಣೇಗೌಡ, ಖಜಾಂಚಿ ಎಚ್.ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಭಟ್ ಉಪಸ್ಥಿತರಿದ್ದರು.

-ಸರ್ಕಾರಕ್ಕೆ ಹಕ್ಕೊತ್ತಾಯಗಳು:

* ಕಾವೇರಿ ನೀರನ್ನು ಒಕ್ಕೂಟದ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಗೆ ಒದಗಿಸುವುದು

* ಒಳಚರಂಡಿ ವ್ಯವಸ್ಥೆಯನ್ನು ಸುವ್ಯಸ್ಥಿತಗೊಳಿಸುವುದು

* ಜನಸಾಂದ್ರತೆಗೆ ಅನುಗುಣವಾಗಿ ತ್ಯಾಜ್ಯ ಶುದ್ಧೀಕರಣ ಘಟಕ ತೆರೆಯುವುದು, ಆ ಮೂಲಕ ಶುದ್ದೀಕರಣ ಮಾಡಿದ ನೀರನ್ನು ಕೃಷಿ ಆಧಾರಿತ ಚಟುವಟಿಕೆಗಳಿಗೆ ಮರುಬಳಕೆ ಮಾಡುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು

* ಒಳಚರಂಡಿ ವ್ಯವಸ್ಥೆಯ ಅಂತರಸಂಪರ್ಕ ಜಾಲವನ್ನು ವಿಸ್ತರಿಸಿ ಸದೃಢಗೊಳಿಸುವುದು

* ಅವೈಜ್ಞಾನಿಕ ವಿದ್ಯುತ್ ವ್ಯವಸ್ಥೆ ಸರಿಪಡಿಸುವುದು ಹಾಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದು

* ರಾಜಕಾಲುವೆ ಒತ್ತುವರಿ ತೆರವು ಮಾಡುವುದು ಹಾಗೂ ಮಳೆ ನೀರು ಸುಗಮವಾಗಿ ಹರಿಯಲು ಅವಕಾಶ ಕಲ್ಪಿಸುವುದು

* ದಶಕಗಳ ಹಿಂದೆ ಮಾಡಿದ ರಸ್ತೆಗಳು ಭಾಗಶಃ ಹಾಳಾಗಿದ್ದು, ಅವುಗಳ ಕಾಮಗಾರಿ ನಿರ್ವಹಿಸುವುದು

* ನಗರ ಸಾರಿಗೆ ಸಂಸ್ಥೆಯ ಬಸ್ ಸಂಪರ್ಕ ಜಾಲ ಹೆಚ್ಚಿಸುವುದು

* ರಿಂಗ್ ರಸ್ತೆ ಆಸುಪಾಸು ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದ್ದು, ಅಂತಹ ವಲಯಗಳನ್ನು ಗುರುತಿಸಿ ಸಂಚಾರ ನಿಯಂತ್ರಣ ಸಿಗ್ನಲ್ ಅಳವಡಿಸುವುದು

* ರಿಂಗ್ ರಸ್ತೆ ನಂತರದ ಬಡಾವಣೆಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಸದೃಢಗೊಳಿಸುವುದು, ಆ ಮೂಲಕ ಸಂಭವನೀಯ ಅಪರಾಧ ತಡೆಯುವುದು

* ಸಾಮಾಜಿಕ ಅರಣ್ಯ ಯೋಜನೆಯಡಿ, ನಾಗರಿಕ ಸಮಾಜವನ್ನು ಒಳಗೊಂಡಂತೆ ಬಡಾವಣೆಯನ್ನು  ಹಸಿರೀಕರಣಗೊಳಿಸುವುದು

* ಬಡಾವಣೆಯಲ್ಲಿರುವ  ಉದ್ಯಾನವನಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ಅವುಗಳನ್ನು ವ್ಯವಸ್ಥಿತವಾಗಿ ಅಭಿವೃದ್ದಿಪಡಿಸುವುದು

* ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಹಾಗೂ ವ್ಯಾಯಾಮ ಪರಿಕರಗಳನ್ನು ಅಳವಡಿಸುವುದು

* ಜನಸಾಂದ್ರತೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ ತೆರೆಯುವುದು

* ಬಡಾವಣೆಗಳ ಸೌಂದರ್ಯಕ್ಕೆ ಪೂರಕವಾಗಿರುವ ಕೆರೆ ಹಾಗೂ ಕಟ್ಟೆಗಳನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ದಿಪಡಿಸುವುದು

* ಮಳೆ ಕೊಯ್ಲು ಯೋಜನೆ ಕಡ್ಡಾಯ ಅನುಷ್ಠಾನಕ್ಕೆ ಮುತುವರ್ಜಿ ವಹಿಸುವುದು

* ರುದ್ರಭೂಮಿಗೆ ಸ್ಥಳ ಮೀಸಲಿಟ್ಟು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು.

Key words: Massive, protest, Mysore East Zone, Union, July 15

Tags :

.