For the best experience, open
https://m.justkannada.in
on your mobile browser.

ಮೇ 19 ರಂದು ಡಾ. ಪ್ರಕಾಶ ಭಟ್ ಅವರ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಕೃತಿ ಬಿಡುಗಡೆ

01:00 PM May 15, 2024 IST | prashanth
ಮೇ 19 ರಂದು ಡಾ  ಪ್ರಕಾಶ ಭಟ್ ಅವರ  ಹಳ್ಳಿಗಳನ್ನು ಕಟ್ಟುವ ಕಷ್ಟಸುಖ  ಕೃತಿ ಬಿಡುಗಡೆ

ಬೆಂಗಳೂರು,ಮೇ,15,2024 (www.justkannada.in): ಖ್ಯಾತ ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್ ಅವರ ಮಹತ್ವದ ಕೃತಿ, 'ಬಹುರೂಪಿ'ಯ ಪ್ರಕಟಣೆ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಬಿಡುಗಡೆಯನ್ನು ಈ ಭಾನುವಾರ ( ಮೇ 19) ರಂದು ಧಾರವಾಡದಲ್ಲಿ, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ 'ಬಹುರೂಪಿ' ಹಾಗೂ ಸೂರಶೆಟ್ಟಿಕೊಪ್ಪದ 'ಸರ್ವೋದಯ ಮಹಾಸಂಘ' ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲಿ ಹೊಸ ಕಾಣ್ಕೆಯನ್ನು ನೀಡುವ ಕೃತಿ ಇದು. ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಹಾಗೂ ಶಿರಸಿ ತಾಲೂಕಿನ ದಾಸನಕೊಪ್ಪದ 50 ಹಳ್ಳಿಗಳು ಹೊಸ ಬೆಳಕಿನತ್ತ ಹೆಜ್ಜೆ ಹಾಕಿದ ಕಥನ ಇದು. ಈ ಕೃತಿಯನ್ನು ಈ ಹಳ್ಳಿಗಳವರೇ ಬಿಡುಗಡೆಗೊಳಿಸುತ್ತಿದ್ದಾರೆ ಎನ್ನುವುದು ವಿಶೇಷ ಎಂದು ಬಹುರೂಪಿಯ ಸ್ಥಾಪಕರಾದ ಶ್ರೀಜಾ ವಿ.ಎನ್ ಹಾಗೂ ಸರ್ವೋದಯ ಮಹಾಸಂಘದ ರೇಣಪ್ಪಗೌಡ ಭಾವಿಕಟ್ಟಿ ಅವರು ತಿಳಿಸಿದ್ದಾರೆ.

ಖ್ಯಾತ ವಿಜ್ಞಾನ ಅಂಕಣಕಾರ, ಸಾಹಿತಿ ಹಾಗೂ ಹಳ್ಳಿಗಳ ಈ ಮಾರ್ಪಾಟನ್ನು ಸ್ವತಃ ಕಂಡ ನಾಗೇಶ ಹೆಗಡೆ ಅವರು ಈ ಕೃತಿಯ ವಿಶೇಷತೆಯ ಬಗ್ಗೆ ಮಾತನಾಡಲಿದ್ದಾರೆ. ಆ ನಂತರದಲ್ಲಿ ಡಾ. ಪ್ರಕಾಶ್ ಭಟ್ ಅವರೊಂದಿಗೆ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖದ ಬಗ್ಗೆಯೇ ಸಂವಾದ ಜರುಗಲಿದೆ.

ಹಿರಿಯ ಪತ್ರಕರ್ತ ಜಿ.ಎನ್ ಮೋಹನ್, ಆಂಧ್ರ ಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ತೇಜಸ್ವಿ ಕಟ್ಟೀಮನಿ, ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಡಾ. ಬಿಳಿಗೆರೆ ಕೃಷ್ಣಮೂರ್ತಿ ಅವರು ಸಂವಾದದಲ್ಲಿ ಭಾಗವಹಿಸುತ್ತಾರೆ. ಸುನಂದಾ ಪ್ರಕಾಶ್ ಅವರು ಈ ಇಡೀ ಹಳ್ಳಿ ಕಟ್ಟುವ ಪ್ರಕ್ರಿಯೆಗೆ ಪ್ರತಿಕ್ರಿಯಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸೂರಶೆಟ್ಟಿಕೊಪ್ಪ ಹಾಗೂ ದಾಸನಪುರದ ಹಲವಾರು ಗ್ರಾಮಸ್ಥರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಬಹುರೂಪಿಯ ಪ್ರಕಟಣೆಗಳ ಪ್ರದರ್ಶನ-ಮಾರಾಟವಿರುತ್ತದೆ.

Key words: May 19-Dr. Prakash Bhatt- work - Release

Tags :

.