ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್ ಗೆ ಒಂದೇ ದರ ನಿಗದಿಗೆ ನಿರ್ಧಾರ- ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು,ಜುಲೈ,3,2024 (www.justkannada.in): ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್ ಗೆ ಒಂದೇ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಂದು ಸಂಜೆ ಅಥವಾ ನಾಳೆ ಆದೇಶ ಹೊರಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಎಲ್ಲಾ ಖಾಸಗಿ ಆಸ್ಪತ್ರೆಗಳು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು. ಲಾಭದ ಆಸೆಯನ್ನ ನೋಡಬಾರದು. ರಾಜ್ಯ ಸರ್ಕಾರದಿಂದ ಡೆಂಘೀ ಟೆಸ್ಟ್ ದರ ನಿಗದಿ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ದರ ನಿಗದಿ ಮಾಡಲು ನಿರ್ಧಾರ ಮಾಡಲಾಗಿದೆ. ಇಂದು ಸಂಜೆ ಅಥವಾ ನಾಳೆ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು.
ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಡೆಂಗ್ಯೂ ಪಾಸಿಟಿವ್ ಪ್ರಕರಣಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಳೆದ ಸಾಲಿಗೆ ಹೊಲಿಸಿದರೆ ಈ ಬಾರಿ ಡೆಂಘೀ ಪ್ರಕರಣಗಳ ಟೆಸ್ಟಿಂಗ್ ನಲ್ಲಿ ಶೇ 42 ರಷ್ಟು ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
Key words: Minister, Dinesh Gundurao, dengue test, private hospitals