ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ಶಂಕುಸ್ಥಾಪನೆ
ಮೈಸೂರು, ಜುಲೈ,27,2024 (www.justkannada.in): ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹಾದೇವಪ್ಪ ಶಂಕು ಸ್ಥಾಪನೆ ನೆರವೇರಿಸಿದರು.
ಟಿ.ನರಸೀಪುರ ತಾಲೂಕು ಯಾಚೇನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮನುಜಮತ ವಿಶ್ವಪಥ ಎಂದು ಸಾರಿದ ಕುವೆಂಪುರವರ ವೈಚಾರಿಕ ಪ್ರಜ್ಞೆಯನ್ನ ನಾವಿಂದು ಮೈಗೂಡಿಸಿಕೊಳ್ಳಬೇಕಾಗಿದೆ. ಅವರು ಪ್ರತಿಪಾದಿಸಿದ ವೈಜ್ಞಾನಿಕ ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಯಬೇಕಾಗಿದೆ. ಈ ನಾಡಿನ ವೈಚಾರಿಕ ಆತ್ಮಸಾಕ್ಷಿಗಳಾದ ಬುದ್ದ, ಬಸವ, ಅಂಬೇಡ್ಕರ ಅವರ ಸಾಲಿನಲ್ಲಿ ಕುವೆಂಪು ನಿಲ್ಲುತ್ತಾರೆ ಎಂದರು.
ಮಂತ್ರ ಮಾಂಗಲ್ಯ ವಿವಾಹಗಳ ಮೂಲಕ ಶೂದ್ರ ವರ್ಗದವರು ಮಾಡುತಿದ್ದ ಖರ್ಚುಗಳಿಗೆ ತಿಲಾಂಜಲಿ ಹೇಳಿ ಆಡಂಬರದ ವಿವಾಹಗಳಿಂದಾಗುವ ಪರಿಣಾಗಳ ಬಗೆಗೆ ತಿಳಿ ಹೇಳಿದರು.
ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆಯುವುದರೊಂದಿಗೆ ಸಾಹಿತ್ಯದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾದರು ಅಂತಹವರ ಉದಾತ್ತ ಸಾಹಿತ್ಯವನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗಾನಂದ ಸ್ವಾಮೀಜಿಗಳ ಕಾರ್ಯ ಸ್ತುತ್ಯಾರ್ಹ ಎಂದು ಎಂದು ಹೆಚ್.ಸಿ ಮಹದೇವಪ್ಪ ನುಡಿದರು.
ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್, ನಿವೇಶನ ದಾನಿಗಳಾದ ಶಂಕರೇಗೌಡ, ಸಂಸ್ಕೃತಿ ಚಿಂತಕ ಭಗವಾನ್, ನಾಗಾನಂದ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.
Key words: Minister, HC Mahadevappa, Kuvempu, Ashes Memorial