HomeBreaking NewsLatest NewsPoliticsSportsCrimeCinema

16 ಎಸಿಎಫ್ ಗಳಿಗೆ ನೇಮಕಾತಿ ಪತ್ರ ವಿತರಿಸಿ ಪ್ರತಿಜ್ಞಾವಿಧಿ ಬೋಧಿಸಿದ ಸಚಿವ ಈಶ್ವರ ಖಂಡ್ರೆ

05:34 PM Jul 15, 2024 IST | mahesh

 

ಬೆಂಗಳೂರು, ಜು. 15,2024: (www.justkannada.in news)ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನೇರ ನೇಮಕಾತಿಗೊಂಡಿರುವ 16 ಅಭ್ಯರ್ಥಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಜ್ಞಾವಿಧಿ ಬೋಧಿಸಿ  ನೇಮಕಾತಿ ಪತ್ರ ವಿತರಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಎ.ಸಿ.ಎಫ್.ಗಳಾಗಿ ನೇಮಕಗೊಂಡಿರುವ 10 ಮಹಿಳಾ ಅಭ್ಯರ್ಥಿಗಳು ಮತ್ತು 6 ಪುರುಷ ಅಭ್ಯರ್ಥಿಗಳಿಗೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ನೇಮಕಾತಿ ಪತ್ರ ಹಸ್ತಾಂತರಿಸಿ,ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಎಲ್ಲ ವಿದ್ಯಾವಂತರಿಗೂ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವ ಅವಕಾಶ ದೊರಕುವುದಿಲ್ಲ. ನೀವೆಲ್ಲರೂ ಪ್ರತಿಭಾವಂತರು ಮತ್ತು ಅದೃಷ್ಟವಂತರಾಗಿದ್ದೀರಿ. ನಿಮಗೆ ಲಭಿಸಿರುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ಹಾಗೂ ವನ್ಯಜೀವಿ ಸಂರಕ್ಷಣೆ ಮಾಡುವಂತೆ ಕರೆ ನೀಡಿದರು.

ಇಂದು ಇಡೀ ವಿಶ್ವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಂತಹ ಬೃಹತ್ ಸವಾಲು ಎದುರಿಸುತ್ತಿದೆ. ಅರಣ್ಯ ಸಂರಕ್ಷಣೆ ಹಿಂದೆಂದಿಗಿಂತಲೂ ಇಂದು ಅತ್ಯಂತ ಮಹತ್ವದ್ದಾಗಿದೆ. ಈ ಕಾಲಘಟ್ಟದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ನೀವು, ಅರಣ್ಯವನ್ನು ಸಂರಕ್ಷಿಸಲು ಇಲಾಖೆಗೆ ಸಹಾಯಕರಾಗಬೇಕು ಎಂದು ಹೇಳಿದರು.

ಸರ್ಕಾರಿ ಕೆಲಸ ದೇವರ ಕೆಲಸ. ಈ ಘೋಷಣೆಯನ್ನು ವಿಧಾನಸೌಧದ ಪ್ರವೇಶ ದ್ವಾರದಲ್ಲೇ ಕೆತ್ತಿಸಲಾಗಿದೆ. ನೀವೆಲ್ಲರೂ ಅರಣ್ಯ ಸಂರಕ್ಷಣೆಯನ್ನು ದೇವರ ಕೆಲಸ ಎಂದು ಮಾಡಿ. ಅರಣ್ಯ ಉಳಿಸಿ, ಪಕ್ಷಿ ಸಂಕುಲ, ಪ್ರಾಣಿ ಸಂಕುಲ ಮತ್ತು ಕೀಟ ಸಂಕುಲ ಉಳಿಸಿ, ಕಾಡನ್ನು ಕಾಪಾಡಿ, ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಶ್ರಮಿಸಿ ಎಂದರು.

ಅರಣ್ಯ ಕಾಯಿದೆ ಅಡಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರವೂ ನಿಮಗೆ ಬರುತ್ತದೆ. ನಿಮ್ಮ ಅಧಿಕಾರ ಬಳಸಿ ಒತ್ತುವರಿ ತೆರವು ಮಾಡಿ, ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ ಉತ್ತಮ ಅಧಿಕಾರಿ ಎಂಬ ಹೆಸರು ಗಳಿಸಿ ಎಂದು ಈಶ್ವರ ಖಂಡ್ರೆ ಕಿವಿಮಾತು ಹೇಳಿದರು.

ಪ್ರತಿಜ್ಞಾವಿಧಿ ಬೋಧನೆ:

ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ಶ್ರದ್ಧಾಪೂರ್ವಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಅರಣ್ಯ, ಅರಣ್ಯೋತ್ಪನ್ನ, ವನ್ಯಜೀವಿ ಸಂರಕ್ಷಣೆ ಮಾಡುತ್ತೇನೆ. ಜನಪರವಾಗಿ, ಜನಸ್ನೇಹಿಯಾಗಿ ಒತ್ತುವರಿ ತೆರವು ಮಾಡುತ್ತೇನೆ. ವೃಕ್ಷ ಸಂಪತ್ತು ಮತ್ತು ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಶ್ರಮಿಸುತ್ತೇನೆ. ಅರಣ್ಯ ಇಲಾಖೆಯ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದು ನೂತನ ಎ.ಸಿ.ಎಫ್ ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

3 ವರ್ಷ ತರಬೇತಿ:

ಇಂದು ನೇಮಕಾತಿ ಪತ್ರ ಪಡೆದ ಎ.ಸಿ.ಎಫ್.ಗಳು 2024ರ ಆಗಸ್ಟ್ 21ರಿಂದ 2 ವರ್ಷಗಳ ಕಾಲ ಡೆಹರಾಡೂನ್ ನಲ್ಲಿ ತರಬೇತಿ ಪಡೆಯಲಿದ್ದು ನಂತರ ಒಂದು ವರ್ಷ ರಾಜ್ಯದಲ್ಲಿ ಒ.ಜೆ.ಟಿ. (ಆನ್ ಜಾಬ್ ಟ್ರೈನಿಂಗ್) ಪಡೆಯಲಿದ್ದು, ಇದು ಪ್ರೊಬೇಷನರಿ ಅವಧಿಯಾಗಿರುತ್ತದೆ. ನಂತರ ಅವರಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು.

ವಿಧಾನಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ್ ಮೋದಿ, ಮಾಜಿ ಶಾಸಕ ಎಂ.ಪಿ.ನಾಡಗೌಡ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಸಿ. ರೈ ಮತ್ತಿತರರು ಪಾಲ್ಗೊಂಡಿದ್ದರು.

key words: Minister Ishwar Khandre, administers oath, of office to, 16 ACFs

SUMMARY.

He handed over appointment letters to 10 women candidates and six male candidates who have been appointed as ACFs by the Karnataka Public Service Commission at his office in Vikasa Soudha here today.

Tags :
16 ACFsadministers oathMinister Ishwar Khandreof office to
Next Article