ಸರ್ವ ಶಿಕ್ಷಣ ಅಭಿಯಾನಕ್ಕೂ ಅನುದಾನ ತಾರತಮ್ಯ- ಸಚಿವ ಮಧು ಬಂಗಾರಪ್ಪ ಆರೋಪ.
ಮೈಸೂರು,ಫೆಬ್ರವರಿ,6,2024(www.justkannada.in): ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಸರ್ವ ಶಿಕ್ಷಣ ಅಭಿಯಾನಕ್ಕೂ ಅನುದಾನದಲ್ಲಿ ತಾರತಮ್ಯ ತೋರುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಮಧು ಬಂಗಾರಪ್ಪ, ದೇವರಂಥ ಮಕ್ಕಳಿಗೆ ಬರಬೇಕಾದ ಹಣವನ್ನೂ ಕೊಟ್ಟಿಲ್ಲ. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರತಿ ಮಗುವಿಗೂ ಸರಾಸರಿ 5500 ರೂ. ಅನುದಾನ ನೀಡಬೇಕು. ಆಯಾ ರಾಜ್ಯಕ್ಕೆ ಅನುಗುಣವಾಗಿ ಶೇ.10-15ರಷ್ಟು ವ್ಯತ್ಯಾಸ ಇರುತ್ತೆ. ಆದರೆ ನಮ್ಮ ರಾಜ್ಯಕ್ಕೆ 2400 ರೂ. ಮಾತ್ರ ಕೊಟ್ಟಿದ್ದಾರೆ. ಇದರ ವಿರುದ್ಧ ನಾನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದೇನೆ. ಇದುವರೆಗೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ನಮ್ಮ ಪಾಲು ಕೇಳಲು ನಾವು ಪ್ರತಿಭಟನೆ ಮಾಡಲು ಹೊರಟಿದ್ದೇವೆ ಎಂದರು.
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ. ಕ್ಷೀರ ಭಾಗ್ಯ ಹಾಲಿಗೆ ರಾಗಿ ಮಾಲ್ಟ್ ಹಾಕಿ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿದೆ. ವಾರಕ್ಕೆ ಮೂರು ದಿನ ಹಾಲು ಕೊಡುತ್ತಿದ್ದೇವೆ. ಆ ಹಾಲಿಗೆ ರಾಗಿ ಮಾಲ್ಟ್ ಪೌಡರ್ ಹಾಕಿ ಕೊಡಲು ಚಿಂತನೆ ಮಾಡಿದ್ದೇನೆ.ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಶೀಘ್ರದಲ್ಲೇ ಯೋಜನೆ ಜಾರಿಗೆ ಬರಲಿದೆ. ಹಿಂದೆ ವಾರದಲ್ಲಿ ಒಂದು ಮೊಟ್ಟೆ ಕೊಡುತ್ತಿದ್ದರು. ನಾವು ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮಕ್ಕಳ ಪೌಷ್ಠಿಕಾಂಶ ಜಾಸ್ತಿ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಿಎಂ ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು.
ನನ್ನ ಇಲಾಖೆ ತುಂಬಾ ದೊಡ್ಡದು. ಸಿಎಂ ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಟಫ್ ಇಲಾಖೆ ಕೊಡಿ ಅಂತ ಹೇಳಿದರು. ಡಿಕೆಶಿ ನನ್ನ ತಂದೆಯವರಿಗೆ ಆತ್ಮೀಯರು. ಸುರ್ಜೇವಾಲ ಅವರೂ ಒಪ್ಪಿದರು. ನನ್ನ ಇಲಾಖೆ ಸವಾಲಿನ ಇಲಾಖೆ, ಸಮಸ್ಯೆಗಳೂ ಇವೆ. ಸರ್ಕಾರಿ ಶಾಲೆಗಳೇ 58,000 ಶಾಲೆಗಳಿವೆ. ಒಟ್ಟು 1.20 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣದಲ್ಲಿ ಅವಕಾಶ ಮುಖ್ಯ. ಮೂರು ಪರೀಕ್ಷೆ ಜಾರಿಗೆ ತಂದಿದ್ದೇವೆ. ಇದರಿಂದ ದ್ವಿತೀಯ ಪಿಯುಸಿಯಲ್ಲಿ ಮೂರನೇ ಪರೀಕ್ಷೆಗೆ 1.20 ಹಾಜರಾದರು. ಈ ಪೈಕಿ 42,000 ವಿದ್ಯಾರ್ಥಿಗಳು ಪಾಸಾದರು. ಎಸ್‌ಎಸ್‌ಎಲ್‌ಸಿಗೂ ಇದೇ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಮಾರ್ಕ್ಸ್ ಕಾರ್ಡ್‌ನಲ್ಲಿ ಸಪ್ಲಮೆಟ್ರಿ ಅನ್ನುವ ಪದ ಬಳಕೆ ನಿಷೇಧಿಸಿದ್ದೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಗ್ಯಾರೆಂಟಿಗಳನ್ನ ವಿಪಕ್ಷಗಳು ಟೀಕೆ ಟಿಪ್ಪಣಿ ಮಾಡಿದರು. ಆದರೆ ಜನ ನಮ್ಮ ಗ್ಯಾರೆಂಟಿ ನಂಬಿ ಮತ ಹಾಕಿ ಬಹುಮತದ ಸರ್ಕಾರ ಬರುವಂತೆ ಮಾಡಿದ್ರು. ಮುಂಬರುವ ಲೋಕಸಭೆಯಲ್ಲೂ ನಾವು ಜಾಸ್ತಿ ಎಂಪಿಗಳನ್ನು ಗೆಲ್ಲುತ್ತೇವೆ. ಎಷ್ಟು ಅಂತ ಹೇಳೋಲ್ಲ ಗೆದ್ದು ತೋರಿಸುತ್ತೇವೆ. ಜನರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಕಳೆದ ನವೆಂಬರ್ 1 ರಿಂದಲೇ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಹಾಗೂ ನೀರನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದರಿಂದ ಮಕ್ಕಳು ಕಂಪ್ಯೂಟರ್ ಕಲಿಕೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದಾರೆ. ಈ ಹಿಂದೆ ವಿದ್ಯುತ್ ಫ್ರೀ ಇಲ್ಲದರ ಪರಿಣಾಮ ಮಕ್ಕಳಿಗೆ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣದ ಕೊರತೆ ಎದುರಾಗಿತ್ತು. ಈಗ ಯಾವ ತೊಂದರೆ ಇಲ್ಲದೆ ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆ ಎಂದರು.
ಚಕ್ರವರ್ತಿ ಸೂಲಿಬೆಲೆಗೆ ಮಾನ ಮರ್ಯಾದೆ ಇಲ್ಲ.
ಇದೇ ವೇಳೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ಕಿಡಿಕಾರಿದ ಸಚಿವ ಮಧು ಬಂಗಾರಪ್ಪ, ಅವನ್ಯಾರೋ ಚಕ್ರವರ್ತಿ ಸೂಲಿಬೆಲೆ ಅಂತೆ. ತಲೆಹರಟೆ, ಅವನಿಗೆ ಮಾನ ಮರ್ಯಾದೆ ಇಲ್ಲ. ಶುಕ್ರವಾರ ನಮಾಜ್ ಮಾಡಲು ಮುಸ್ಲಿಮರಿಗೆ ಅವಕಾಶ ಅಂತ ಟ್ವೀಟ್ ಮಾಡಿದ್ದಾನೆ. ಇದು ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾನೆ. ಕಾಮನ್ ಸೆನ್ಸ್ ಇಲ್ಲದೆ ಏನೇನೋ ಹೇಳುತ್ತಾರೆ. ನಮ್ಮ ರಾಜ್ಯದ ಜನರ ಬುದ್ದಿವಂತರು ಬಿಜೆಪಿ ಭಾವನಾತ್ಮಕ ವಿಚಾರಗಳಿಗೆ ಸೊಪ್ಪು ಹಾಕಲ್ಲ. ಭಾವನಾತ್ಮಕ ವಿಚಾರ ಬಿತ್ತಿದಷ್ಷು ರಾಜ್ಯದ ಜನ ದೂರು ತಳ್ಳುತ್ತಾರೆ. ನಮ್ಮ ರಾಜ್ಯದಲ್ಲಿ ಬಿಜೆಪಿಯವರ ಆಟ ನಡೆಯೊಲ್ಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದರು.
Key words: Minister -Madhu Bangarappa-Sarva Shiksha Abhiyan – grant- discrimination.