ಆಯಾ ವರ್ಷದ ಅನುದಾನ ಆಯಾ ವರ್ಷವೇ ಖರ್ಚು ಮಾಡುವಂತೆ ಸಚಿವ ಮಹದೇವಪ್ಪ ಖಡಕ್ ಸೂಚನೆ
ಬೆಂಗಳೂರು,ಜನವರಿ,18,2024(www.justkannada.in): ಆಯಾ ವರ್ಷದ ಅನುದಾನವನ್ನ ಆಯಾ ವರ್ಷವೇ ಖರ್ಚು ಮಾಡುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಖಡಕ್ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಡಾ.ಹೆಚ್ ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ನೋಡಲ್ ಏಜೆನ್ಸಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
24% ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರ ಏಳಿಗೆಗಾಗಿ ಕಾಯ್ದೆಯ ರೂಪದಲ್ಲಿ ಕಲ್ಪಿಸಲಾದ ಅನುದಾನದ ಬಳಕೆಯಿಂದ ಅವರ ಬದುಕಿನಲ್ಲಿ ಉಂಟಾದ ಧನಾತ್ಮಕ ಬದಲಾವಣೆಯ ಕುರಿತಾಗಿ ಮೌಲ್ಯಮಾಪನ ವರದಿಯನ್ನು ನೀಡುವಂತೆ ಹಾಗೂ ನೀಡಲ್ಪಟ್ಟ ಇಲಾಖಾವಾರು ಅನುದಾನದಿಂದ ಎಷ್ಟು ಮಂದಿಗೆ ಪ್ರಯೋಜನ ಆಗಿದೆ ಎಂಬ ಅಂಕಿ ಅಂಶವನ್ನು ನೀಡಬೇಕೆಂದು ಸಚಿವರು ಕಟ್ಟುನಿಟ್ಟಿನ ಸಲಹೆಯನ್ನು ನೀಡಿದರು.
ಸುದೀರ್ಘ 6 ಗಂಟೆಗಳ ಕಾಲ ಜರುಗಿದ ಈ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾರ್ಯಕ್ರಮದಡಿ ಇರುವ ಪರಿಣಾಮಕಾರಿಯಾಗಿ ತಲುಪಿಸಿ ಆ ಕುರಿತು ಸರಿಯಾದ ವರದಿಯನ್ನು ನೀಡುವಂತೆಯೂ ಸಚಿವ ಹೆಚ್ ಸಿ ಮಹದೇವಪ್ಪ ಆದೇಶ ನೀಡಿದರು.
ನೋಡಲ್ ಸಭೆಗಳ ನಂತರ ಎಲ್ಲರೂ ಮತ್ತೊಂದು ಸಭೆಯಲ್ಲಿ ಕೇವಲ ಸ್ಪಷ್ಟನೆ ನೀಡದೇ ಕೆಲಸ ಮೂಲಕ ಬಡವರಿಗೆ ಸಹಾಯ ಮಾಡಬೇಕು. ಅಧಿಕಾರಿಗಳೆಂದರೆ ಸರ್ಕಾರ ಮತ್ತು ಜನರ ನಡುವೆ ಸೇತುವೆ ಆಗಿದ್ದು ತಮ್ಮ ಸ್ಥಾನದ ಮಹತ್ವವನ್ನು ಅವರು ಅರಿಯಬೇಕು ಎಂದು ತಿಳಿಸಿದರು.
ಈ ಮಹತ್ವದ ಸಭೆಯಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ನೋಡಲ್ ಏಜೆನ್ಸಿ ಸಲಹೆಗಾರರು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ನಿರ್ದೇಶಕರು ಹಾಗೂ ಅಧಿಕಾರಿಗಳು ಸೇರಿದಂತೆ, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Key words: Minister-Mahadevappa-instructed - spend - grant - year