ಮುನಿರತ್ನಗೆ ಕಠಿಣ ಶಿಕ್ಷೆ ಆಗಬೇಕು: ರಾಜೀನಾಮೆ ನೀಡುವವರೆಗೂ ಹೋರಾಟ- ಪುಷ್ಪ ಅಮರನಾಥ್
ಮೈಸೂರು,ಸೆಪ್ಟಂಬರ್,16,2024 (www.justkannada.in) : ಮುನಿರತ್ನ ಅಂತ ಹೆಸರು ಇಟ್ಟುಕೊಂಡು ಇಂತ ನೀಚ ಮಾತುಗಳನ್ನಾಡುವ ಈತನಿಗೆ ಕಠಿಣ ಶಿಕ್ಷೆ ಆಗಬೇಕು. ಮುನಿರತ್ನ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಪ ಅಮರನಾಥ್, ಶಾಸಕ ಮುನಿರತ್ನ ಅವರ ಅವಹೇಳನಕಾರಿ ಆಡಿಯೋ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದರು.
ಅವನ ಹೆಸರು ಹೇಳಲಿಕ್ಕೂ ಅಸಹ್ಯವಾಗುತ್ತದೆ. ಮಹಿಳೆಯರು, ದಲಿತರ ಅಂದರೆ ಏನೆಂದುಕೊಂಡಿದ್ದಾರೆ ಇವರು? ಬಿಜೆಪಿ ನಾಯಕರ ಮನಸ್ಥಿತಿ ಏನು ಅಂತ ಇಂತ ಬಿಜೆಪಿ ನಾಯಕರ ಮಾತಿನಿಂದ ವ್ಯಕ್ತವಾಗುತ್ತದೆ. ಈ ವಿಚಾರವಾಗಿ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಯಾಕೇ.? ಮುನಿರತ್ನ ಅವರ ರಾಜೀನಾಮೆ ಪಡೆದು ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ವಜಾ ಮಾಡಬೇಕು. ತಾಕತ್ತು ದಮ್ಮುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಈತನ ಮೇಲೆ ಕ್ರಮ ಕೈಗೊಳ್ಳಲಿ. ಮುನಿರತ್ನ ರಾಜಿನಾಮೆ ಕೊಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಪತಿ ಅಮರನಾಥ್ ಹುಡಾ ಅಧ್ಯಕ್ಷರಾಗಿರುವುದಕ್ಕೆ ಸಮರ್ಥನೆ
ಹುಣಸೂರು ನಗರ ಯೋಜನಾ ಪ್ರಾಧಿಕಾರ (ಹುಡಾ) ಅಧ್ಯಕ್ಷರಾಗಿ ಅಮರನಾಥ್ ಆಯ್ಕೆ ಹಿನ್ನಲೆ, ಅಮರನಾಥ್ ನೇಮಕಕ್ಕೆ ಹುಣಸೂರಿನಲ್ಲಿ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಕುಟುಂಬ ರಾಜಕಾರಣ ಎಂಬ ಆಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಮರನಾಥ್ ಅವರ ಪತ್ನಿ ಪುಷ್ಪ ಅಮರನಾಥ್, ದೇವೇಗೌಡರು ಪ್ರಧಾನಿ ಆಗಬಹುದು, ಅವರ ಮಗ ಮುಖ್ಯಮಂತ್ರಿ ಆಗಬಹುದು, ಅವರ ಮೊಮ್ಮಕ್ಕಳು ಎಂಪಿ, ಎಂಎಲ್ ಸಿ ಗಳಾಗಬಹುದು ಎಚ್.ಪಿ ಮಂಜುನಾಥ್ ಕುಂಟುಂಬ ಮಾತ್ರ ಆಗಬಾರದು ಯಾಕೆ.? ಎಂದು ಪ್ರಶ್ನಿಸಿದರು.
ಹುಡಾ ಅಧ್ಯಕ್ಷರಾಗಿರುವುದು ದೊಡ್ಡ ಹುದ್ದೆಯೇನಲ್ಲ. ಅವರು ಕಾಂಗ್ರೆಸ್ ಪಕ್ಷ ಮತ್ತು ಸಂಘಟನೆಗೆ ದುಡಿದಿರುವುದನ್ನು ಗುರುತಿಸಿ ಒಂದು ಸಣ್ಣ ಹುದ್ದೆ ಕೊಟ್ಟಿದ್ದಾರೆ. ಅದರಿಂದ ಜನರಿಗೆ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪುಷ್ಪಾ ಅಮರನಾಥ್ ಅವರು ಪತಿ ಅಮರನಾಥ್ ಹುಡಾ ಅಧ್ಯಕ್ಷರಾಗಿರುವುದನ್ನ ಸಮರ್ಥಿಸಿಕೊಂಡರು.
Key words: MLA, Muniratna, Caste abuse, resignation, Pushpa Amarnath