ಸೋಲು ಗ್ಯಾರಂಟಿಯಾಗುತ್ತಿದ್ದಂತೆ ಮೋದಿ ಸುಳ್ಳುಗಳಿಂದ ಹಾದಿ ತಪ್ಪಿಸುತ್ತಿದ್ದಾರೆ- ಸಿಎಂ ಸಿದ್ದರಾಮಯ್ಯ ಕಿಡಿ.
ಗೋಕಾಕ್, ಏಪ್ರಿಲ್ 30 ,2024 (www.justkannada.in): ಮೊದಲು ಹಾಗೂ ಎರಡನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ, ಎನ್ ಡಿಎ ಅಧಿಕಾರಕ್ಕೆ ಬರುವುದಿಲ್ಲ. ತಮಗೆ ಸ್ಪಷ್ಟ ಸೋಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಮೋದಿಯವರು ಹತಾಶರಾಗಿದ್ದು, ಭಯಾನಕ ಸುಳ್ಳುಗಳಿಂದ ಭಾರತೀಯರನ್ನ ದಾರಿತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಪರವಾಗಿ ಮತ ಮತಯಾಚಿಸಿ ಮಾತನಾಡಿದರು.
ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ಮಾಡನಾಡುವುದಿಲ್ಲ. 2014 ಹಾಗೂ 2019 ರಲ್ಲಿ ಭಾರತೀಯರಲ್ಲಿ ಭ್ರಮೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಒಂದೇ ಒಂದು ಭರವಸೆಗಳನ್ನೂ ಈಡೇರಿಸಲಿಲ್ಲ. ಪ್ರತಿ ಬಾರಿ ಕೇವಲ ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವಂತೆ ಸುಳ್ಳುಗಳನ್ನು ಹೇಳುತ್ತಿಲೇ ಇದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಸಂಪೂರ್ಣ ಹತಾಶರಾಗಿ ಹೆಚ್ಚೆಚ್ಚು ಸುಳ್ಳುಗಳನ್ನು ಹೇಳಿ ಹೇಳಿ ಎಷ್ಟು ಸಾಧ್ಯವೋ ಅಷ್ಟು ಭಾರತೀಯರ ದಾರಿತಪ್ಪಿಸಿ ಲಾಭ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ.
ಬಿಜೆಪಿಯೇತರರು ದಲಿತರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡದೇ, ಸಾಮಾಜಿಕ ನ್ಯಾಯದ ಪರವಾಗಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದರು.
ರಾಜ್ಯ ಸರ್ಕಾರದ ಖಜಾನೆ ಖಾಲಿ ಎಂಬುದು ಅಪ್ಪಟ ಸುಳ್ಳು
ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಹೇಳಿರುವುದು ಅಪ್ಪಟ ಸುಳ್ಳು. ನಾವು ಸರ್ಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ. ಅಭಿವೃದ್ಧಿ ಜೊತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿಗಳಿಗೆ 52009 ಕೋಟಿ ರೂ., 120000 ಕೋಟಿ ರೂ. ಅಭಿವೃದ್ಧಿಗೆ ನೀಡಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗಿದೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೈತ ಸಾಲಮನ್ನಾ ಮಾಡಿದ್ದಾರೆ. ರಾಜ್ಯದಲ್ಲಿ ನಾನು ಸಿಎಂ ಆಗಿದ್ದಾಗ, 27.20 ಲಕ್ಷ ರೈತರಿಗೆ 8165 ಕೋಟಿ ರೂ. ಮೊತ್ತ ಸಾಲವನ್ನು ಮನ್ನಾ ಮಾಡಿದ್ದೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವಂತೆ ನಾವು ಹೋರಾಟ ನಡೆಸಿದ್ದೆವು. ಆಗ ಯಡಿಯೂರಪ್ಪನವರು ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ’ ಎಂದು ರೈತರನ್ನು ಅವಮಾನಿಸಿದ್ದರು.
ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ, ಇಡಿ ದೇಶದ ರೈತರ ಸಾಲ ಸಂಪೂರ್ಣ ಮನ್ನಾ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಗಳನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದು. 25 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ಸಾಮಾಜಿಕ ನ್ಯಾಯ ತರಲು ದೇಶದಾದ್ಯಂತ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು. ಆದ್ದರಿಂದ ಜನರಿಗೆ ಅನುಕೂಲ ಮಾಡಿಕೊಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೇ? ಅಥವಾ ಸುಳ್ಳು ಹೇಳುವ ಮೋದಿಯವರು ಅಧಿಕಾರಕ್ಕೆ ಬರಬೇಕೇ? ಎಂಬುದನ್ನು ಯೋಚಿಸಿ ನಿರ್ಧರಿಸಿ ಎಂದು ಸಿಎಂ ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.
ದೇಶದ ಜನರಿಗೆ ಸುಳ್ಳು ಹೇಳಿದ್ದಾರೆಯೇ ಎಂದು ಜನರು ವಿಚಾರ ಮಾಡಬೇಕು
ಚುನಾವಣೆಯ ಮೂಲಕ ಜನತೆ ಕೊಡುವ ತೀರ್ಪು ದೇಶದ ಭವಿಷ್ಯವನ್ನು ರೂಪಿಸಲಿದೆ. ಯಾವ ಪಕ್ಷ ಅಧಿಕಾರದಲಿದ್ದರೆ ಈ ದೇಶದ ದಲಿತರ, ಹಿಂದುಳಿದವರು, ಅಲ್ಪಸಂಖ್ಯಾತರ ಅಭಿವೃದ್ಧಿಯಾಗುತ್ತದೆ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಯಾರು ಅಧಿಕಾರದಲ್ಲಿರಬೇಕೆಂದು ತೀರ್ಮಾನ ಮಾಡಬೇಕಾಗುತ್ತದೆ. ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ದೇಶದ ಭವಿಷ್ಯವನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡಿದ್ದಾರೆಯೇ? ನುಡಿದಂತೆ ನಡೆದಿದ್ದಾರೆಯೇ? 2014 ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆಯೇ ಅಥವಾ ದೇಶದ ಜನರಿಗೆ ಸುಳ್ಳುಗಳನ್ನು ಹೇಳಿದ್ದಾರೆಯೇ ಎನ್ನುವುದನ್ನು ವಿಚಾರ ಮಾಡಬೇಕು ಎಂದರು.
ಮನ್ ಮೋಹನ್ ಸಿಂಗ್ ಅವರ ಕಾರ್ಯಕ್ರಮಗಳ ಶ್ರೇಯಸ್ಸು ನರೇಂದ್ರ ಮೋದಿ ಪಡೆಯಲು ಪ್ರಯತಿಸುತ್ತಿದ್ದಾರೆ
ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಡಿ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ಅವರು ಈ ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆಯನ್ನು, ಉದ್ಯೋಗ ಖಾತ್ರಿ ಅಧಿನಿಯಮ, ಮಾಹಿತಿ ಹಕ್ಕು ಅಧಿನಿಯಮ, ಶಿಕ್ಷಣದ ಹಕ್ಕು ಇವುಗಳನ್ನು ಜಾರಿಗೆ ತಂದವರು ಮೋಹನ್ ಸಿಂಗ್ ಅವರು. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾನೂನುಗಳು ಇವು ಎಂದು ಅರ್ಥ ಮಡಿಕೊಳ್ಳಬೇಕು. ಆಹಾರ ಭದ್ರತಾ ಕಾಯ್ದೆ ಇಲ್ಲದೇ ಹೋಗಿದ್ದರೆ ಬಡವರಿಗೆ ಉಚಿತ ಅಕ್ಕಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಜಾರಿ ಮಾಡಿದ್ದು ನರೇಂದ್ರ ಮೋದಿ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು. ಅದರ ಶ್ರೇಯಸನ್ನು ಪಡೆಯಲು ಅವರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
15 ಲಕ್ಷ ಹಾಕ್ತೀವಿ ಎಂದು ಭಾರತೀಯರನ್ನು ಪುಸಲಾಯಿಸಿ, ಯಾಮಾರಿಸಿ ಅಧಿಕಾರಕ್ಕೆ ಬಂದರು.
ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿ ಹಾಕ್ತೀವಿ ಎಂದು ಪುಸಲಾಯಿಸಿ, ಯಾಮಾರಿಸಿ ಹತ್ತು ವರ್ಷಗಳಾದರೂ ಈವರೆಗೆ ಯಾರ ಖಾತೆಗೂ 15ರೂ. ಕೂಡ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು, ನಿರುದ್ಯೋಗಿ ಯುವಕರು ಕೆಲಸ ಕೊಡಿ ಎಂದರೆ ಪಕೋಡ ಮಾರಿ ಎಂದು ಅತ್ಯಂತ ಬೇಜವಾಬ್ದಾರಿ ಉತ್ತರ ನೀಡಿದರು. ಇವರು ಈ ದೇಶದ ಪ್ರಧಾನಿಯಾಗಲು ಯೋಗ್ಯರೇ ಇಲ್ಲವೋ ಎಂದು ವಿಚಾರ ಮಾಡಬೇಕು ಎಂದರು.
2022 ರೊಳಗೆ ರೈತರ ಆದಾಯವನ್ನು ಎರಡು ಪಟ್ಟು ಮಾಡುವುದಾಗಿ ಹೇಳಿದರು, ಆದರೆ ರೈತರ ಖರ್ಚು ಮೂರು ಪಟ್ಟು ಹೆಚ್ಚಾಯಿತೇ ಹೊರತು ಹೆಚ್ಚಾಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಯಿತು. ಅಚ್ಚೇ ದಿನ್ ಬರಲಿಲ್ಲ ಎಂದು ಸಿದ್ದರಾಮಯ್ಯ ಕುಟುಕಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಎಐಸಿಸಿ ಕಾರ್ಯದರ್ಶಿಗಳು, ಶಾಸಕರಾದ ವಿ.ಕೆ.ಸಂಗಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ಪಕ್ಷದ ಮುಖಂಡರಾದ ಡಾ. ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ , ಚಂದ್ರಶೇಖರ್ ಕೊಣ್ಣೂರು, ಸಿದ್ದಲಿಂಗ ದಳವಾಯಿ, ಹಾಗೂ ಮುಖಂಡರು ಉಪಸ್ಥಿತರಿದ್ದರು.
Key words: Modi, deviating, lies, Siddaramaiah