ರಾಜ್ಯಕ್ಕೆ ಹೆಚ್ಚಿನ ಅನುದಾನ: ಜಿಎಸ್ಟಿ ಹಣ ಒಂದು ಪೈಸೆಯೂ ಬಾಕಿ ಉಳಿಸಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಬೆಂಗಳೂರು, ಫೆಬ್ರವರಿ,13,2024(www.justkannada.in): ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಜಿಎಸ್ಟಿ ಹಣ ಒಂದು ಪೈಸೆಯೂ ಬಾಕಿ ಉಳಿಸಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಕೇಂದ್ರ ಸರ್ಕಾರದ ವಿರುದ್ದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ ಹಿನ್ನೆಲೆ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಸುಳ್ಳು ಹೇಳುವಂತಹ ಕ್ಯಾಂಪೇನ್ ಶುರು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ . ತಮ್ಮ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸಲು ಯತ್ನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
2004 ರಿಂದ 2014ರ ವರೆಗೆ ಕಾಂಗ್ರೆಸ್ ನೇತೃತ್ವದ ಅಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ, ಮೋದಿ ನೇತೃತ್ವದ ಸರ್ಕಾರವು ಕಳೆದ 10 ವರ್ಷಗಳಲ್ಲಿ 2.36 ಲಕ್ಷ ಕೋಟಿ ಅನುದಾನ ನೀಡಿದೆ. ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಬಿಜೆಪಿ ಸರ್ಕಾರ ಶೇ.243 ರಷ್ಟು ಹೆಚ್ಚು ಅನುದಾನ ನೀಡಿದೆ. ಎನ್ಡಿಆರ್ಎಫ್ ಅಡಿ ನಾಲ್ಕು ಪಟ್ಟು ಹೆಚ್ಚು ಹಣ ರಾಜ್ಯಕ್ಕೆ ಕೊಟ್ಟಿದ್ದೇವೆ , 2004 ರಿಂದ 2014ರ ವರೆಗೆ ಯುಪಿಎ ಕಾಲದಲ್ಲಿ ರಾಜ್ಯಕ್ಕೆ 3,655 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 12,542 ಕೋಟಿ ರೂಪಾಯಿ ನೀಡಿದೆ ಎಂದು ಪ್ರಹ್ಲಾದ್ ಜೋಶಿ ವಿವರಿಸಿದರು.
Key words: More grants – state- GST -money - Union Minister- Prahlad Joshi.