For the best experience, open
https://m.justkannada.in
on your mobile browser.

ಮುಡಾ ಅವ್ಯವಹಾರ ಆರೋಪ: ಬಿಜೆಪಿ ಪ್ರತಿಭಟನೆ ಬೃಹನ್‌ ನಾಟಕ- ಲೋಕೇಶ್ ವಿ.ಪಿಯಾ

06:22 PM Jul 04, 2024 IST | prashanth
ಮುಡಾ ಅವ್ಯವಹಾರ ಆರೋಪ  ಬಿಜೆಪಿ ಪ್ರತಿಭಟನೆ ಬೃಹನ್‌ ನಾಟಕ  ಲೋಕೇಶ್ ವಿ ಪಿಯಾ

ಮೈಸೂರು,ಜುಲೈ,4,2024 (www.justkannada.in): ಮೈಸೂರಿನ ಮುಡಾದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಬೃಹನ್‌ ನಾಟಕ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ ವಿ.ಪಿಯಾ ಟೀಕಿಸಿದರು.

ಈ ಕುರಿತು ಮಾತನಾಡಿದ ಲೋಕೇಶ್ ಪಿಯಾ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು, ತನಿಖೆ ಮುಗಿದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಜತೆಗೆ, ಹಂಚಿಕೆಯಾದ ನಿವೇಶನಗಳನ್ನು ಅಮಾನತ್ತಿನಲ್ಲಿ ಇಟ್ಟಿರುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳನ್ನು ತನಿಖೆಗೆ ನೇಮಕ ಮಾಡಲಾಗಿದೆ. ಈ ವರದಿ ಬಂದ ನಂತರ ಪ್ರಕರಣದ  ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಬಿಜೆಪಿಯವರು ಈ ವಿಷಯವನ್ನೇ ಹಿಡಿದು ಹಗ್ಗಜಗ್ಗಾಡುತ್ತಿರುವುದರ ಆಶ್ವರ್ಯಕರವಾಗಿದೆ ಎಂದು ಲೋಕೇಶ್ ವಿ. ಪಿಯಾ ಕಿಡಿಕಾರಿದರು.

ಹಿಂದೆ ಈ ನಿವೇಶನ ಹಂಚಿಕೆ ಮಾಡಿದಾಗ ಅಧಿಕಾರದಲ್ಲಿ ಇದ್ದದ್ದು ಬಿಜೆಪಿ ಸರಕಾರವೇ ಹೊರತು ಕಾಂಗ್ರೆಸ್‌ ಸರಕಾರವಲ್ಲ. ಒಂದು ವೇಳೆ ನಿವೇಶನ ಹಂಚಿಕೆಯಲ್ಲಿ ತಪ್ಪಾಗಿದ್ದರೆ ಅದನ್ನು ಎಸಗಿದವರು ಬಿಜೆಪಿಯವರೇ . ಅಂದ ಮೇಲೆ ಈಗ ಅವರು ಕಾಂಗ್ರೆಸ್‌ ಸರಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ.

ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರು, ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ಒತ್ತಾಯಿಸುತ್ತಿದ್ದಾರೆ. ಆದರೆ ಈ ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಎಷ್ಟು  ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಲೋಕೇಶ್ ಪಿಯಾ ಸವಾಲು ಹಾಕಿದರು.

ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ. ಈಗ ಅವರೇ ಅದನ್ನು ಹಗರಣ ಎನ್ನುತ್ತಿದ್ದಾರೆ. ಇದನ್ನು ನೋಡಿದರೆ ಅಧಿಕಾರ ಕಳೆದುಕೊಂಡು ಮತಿ ಭ್ರಮಣೆಗೆ ಒಳಗಾಗಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ ಎಂದು ಲೇವಡಿ ಮಾಡಿದರು.

Key words: Muda, Allegation, BJP, protests, drama, Lokesh V.Pia

Tags :

.