ಹಂಚ್ಯಾ-ಸಾತಗಳ್ಳಿ ಬಡಾವಣೆ , MUDA ನೀಡಿರುವುದು ಬದಲಿ ನಿವೇಶನ : ಎಚ್.ಎಂ.ನಂದೀಶ್ ಸ್ಪಷ್ಟನೆ
ಮೈಸೂರು, ಆ. 7,2024: (www.justkannada.in news) ಹಂಚ್ಯಾ-ಸಾತಗಳ್ಳಿ ಬಡಾವಣೆ ಬಿ ವಲಯದಲ್ಲಿ ರಿಂಗ್ ರಸ್ತೆ ಸಮೀಪದ ೫೦x೮೦ ಅಡಿ ನಿವೇಶನವನ್ನು ಬದಲಿ ನಿವೇಶನವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ನಿವೇಶನದ ಮಾಲೀಕರಾದ ಎಂ.ಎನ್. ನಂದೀಶ್ ಸ್ಪಷ್ಟಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಜತೆ ಮಾತನಾಡಿದ ನಂದೀಶ್ ಅವರು ಹೇಳಿದಿಷ್ಟು.
ನಾಚನಹಳ್ಳಿ-ಕೊಪ್ಪಲೂರು ೩ ನೇ ಹಂತ ಸಿ ವಲಯ ಬಡಾವಣೆಯಲ್ಲಿನ ನಿವೇಶನ ಸಂಖ್ಯೆ ೨೧೭ /ಎ ಅಳತೆ 50 x 80 ಅಡಿಗಳ ನಿವೇಶನವನ್ನು ೧೯೯೨ ರಲ್ಲಿ ಬಸವಲಿಂಗಪ್ಪ ಎಂಬುವವರಿಗೆ ಮುಡಾ ಮಂಜೂರು ಮಾಡಿತ್ತು.
ನಂತರ ಈ ಜಾಗದ ಭೂ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆ ಉದ್ಭವಿಸಿತ್ತು. ಮುಡಾ ವಿರುದ್ಧ ಭೂ ಮಾಲೀಕರು ನ್ಯಾಯಾಂಗ ನಿಂದನೆ ಕೇಸು ದಾಖಲಿಸಿದ್ದರು. ಈ ನಿವೇಶನವನ್ನು ನಾನು ಮೂಲ ಮಂಜೂರಾತಿದಾರರಾದ ಬಸವಲಿಂಗಪ್ಪ ಅವರಿಂದ ಖರೀದಿಸಿದೆ. ೨೬.೦೫.೨೨ ರಂದು ಶುದ್ಧಕ್ರಮಪತ್ರ ಆಧಾರದ ಮೇರೆಗೆ ವರ್ಗಾವಣೆ ಶುಲ್ಕ ಪಾವತಿಸಿ ೭.೩೨೩ ರಂದು ಖಾತಾ ವರ್ಗಾವಣೆ ಮಾಡಿಸಿಕೊಂಡಿದ್ದೆ.
ಆದರೆ ಸದರಿ ನಿವೇಶನದ ಕಾನೂನು ತೊಡಕಿನ ಕಾರಣದಿಂದ ಅರ್ಜಿದಾರರಿಗೆ ಕೊಪ್ಪಲೂರು ೩ ನೇ ಹಂತದಲ್ಲಿ ಮಂಜೂರಾಗಿದ್ದ ನಿವೇಶನಕ್ಕೆ ಬದಲಿ ನಿವೇಶನವನ್ನು ಮುಡಾ ಹಂಚಿಕೆ ಮಾಡಲು ತೀರ್ಮಾನಿಸಿ ಅದರಂತೆ ನಿವೇಶಗಳನ್ನು ಹಂಚಿಕೆ ಮಾಡಿದೆ.
ಸರಿ ಸುಮಾರು ೩೦ ವರ್ಷಗಳ ಹಿಂದೆ ಮೂಲ ನಿವೇಶನದಾರರಿಗೆ ಯಾವ ದರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತೋ ಅದೇ ದರದಲ್ಲಿ,(3,03,000 ರೂ) ಖರೀದಿದಾರರಿಗೆ ಬದಲಿ ನಿವೇಶವನ್ನು ಮುಡಾ ನೀಡಿದೆ. ಈ ರೀತಿ ನಿವೇಶನವನ್ನು ಕೇವಲ ನನ್ನೊಬ್ಬನಿಗೆ ಮಾತ್ರ ನೀಡಿಲ್ಲ. ಸಂಬಂದಿಸಿದ ವಿವಾದಿತ ಜಾಗದಲ್ಲಿ ನಿವೇಶನ ಪಡೆದಿದ್ದ ಹತ್ತನ್ನೆರೆಡು ಮಂದಿಗೆ ಮುಡಾ ಬದಲಿ ನಿವೇಶನ ಮಂಜೂರು ಮಾಡಿದೆ. ಆದ್ದರಿಂದ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ನಂದೀಶ್, ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿ ಸ್ಪಷ್ಟನೆ ನೀಡಿದ್ದಾರೆ.
key words: muda, alternative site allotment