For the best experience, open
https://m.justkannada.in
on your mobile browser.

ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸ: ಸಿಎಂ ಸಿದ್ದರಾಮಯ್ಯ

03:24 PM Aug 19, 2024 IST | prashanth
ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್ 19,2024 (www.justkannada.in): ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಫೋಟೋ ಜರ್ನಲಿಸ್ಟ್ ರವರ ವತಿಯಿಂದ ಆಯೋಜಿಸಲಾಗಿದ್ದ ಫೋಟೋ ಎಕ್ಸಿಬಿಷನ್ ಉದ್ಘಾಟಿಸಿದ ನಂತರ  ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾನು ಯಾವ ತಪ್ಪನ್ನೂ ಎಸಗಿಲ್ಲ

ರಿಟ್ ಅರ್ಜಿಯಲ್ಲಿ ಮಧ್ಯಂತರ ಪರಿಹಾರವಾಗಿ ಪ್ರಾಸಿಕ್ಯೂಷನ್ ಗೆ ತಡೆಯಾಜ್ಞೆ ನೀಡಬೇಕೆಂದು ಕೋರಲಾಗಿದೆ. ಈ ರಿಟ್ ಅರ್ಜಿಯ ಬಗ್ಗೆ ಖ್ಯಾತ ವಕೀಲರಾದ ಅಭಿಷೇಕ್ ಮನು ಸಿಂಗ್ವಿಯವರು ವಾದ ಮಂಡಿಸಲಿದ್ದಾರೆ. ನನ್ನ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು, ನಾನು ಯಾವ ತಪ್ಪನ್ನೂ ಎಸಗಿಲ್ಲ. ನಾನು ಮಂತ್ರಿಯಾಗಿ 40 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಜನರ ಆಶೀರ್ವಾದದಿಂದ ಅವರ ಸೇವೆಯಲ್ಲಿ ನಿರತನಾಗಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ರಾಜ್ಯದ ಜನರಿಗೂ ತಿಳಿದಿದೆ ಎಂದರು.

ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟ:

ಬಿಜೆಪಿಯವರು ಸಿಎಂ ರಾಜಿನಾಮೆ ಬೇಡಿಕೆಯಿರಿಸಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರಾಜಭವನವನ್ನು ಬಳಸಿಕೊಂಡು ಬಿಜೆಪಿ, ಜೆಡಿಎಸ್ ಹಾಗೂ ಕೇಂದ್ರ ಸರ್ಕಾರದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ದುರುದ್ದೇಶದಿಂದ ನನ್ನ ಮೇಲೆ ಬಸಿ ಬಳಿಯಲು ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಬಿಜೆಪಿಯವರು ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದು, ರಾಜಕೀಯವಾಗಿ ಇದನ್ನು ಎದಿರುಸುತ್ತೇವೆ. ಈ ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಕೈಗೊಳ್ಳುತ್ತೇವೆ. ಇಂತಹ ರಾಜಕೀಯ ಹೋರಾಟಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಇನ್ನೂ ಹೆಚ್ಚಿನ ಸ್ಪೂರ್ತಿಯೊಂದಿಗೆ  ಹೋರಾಡುತ್ತೇನೆ ಎಂದರು.

ನನ್ನನ್ನು ರಾಜಕೀಯವಾಗಿ ಮುಗಿಸಬಹುದು ಎಂಬುದು ಭ್ರಮೆ

ಪ್ರತಿಪಕ್ಷಗಳಿಗೆ ಸಿಎಂ ಅವರಿಂದ ಭಯ ಕಾಡುತ್ತಿದ್ದು, ಅವರನ್ನೇ ಗುರಿಮಾಡಿಕೊಂಡು ಆಪಾದನೆ ಮಾಡುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಬಡಜನರ ಪರವಾಗಿರುವುದೇ ಪ್ರತಿಪಕ್ಷಗಳ ಭಯಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದು ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯನನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಪಕ್ಷವನ್ನು ಮುಗಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳಿವೆ ಎಂದರು.

Key words: muda case, Full confidence, relief, court, CM Siddaramaiah

Tags :

.