ಏಳೇ ದಿನಗಳಲ್ಲಿ 23,881 ಚದರಡಿ ನಿವೇಶನ ಮಂಜೂರು: ಮುಡಾ ಮಾಜಿ ಆಯುಕ್ತರ ಮತ್ತೊಂದು ಹಗರಣ ಬಯಲು
ಮೈಸೂರು, ಸೆಪ್ಟಂಬರ್, 6, 2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡಿರುವ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಎಸಗಿರುವ ಮತ್ತೊಂದು ಹಗರಣ ಇದೀಗ ಮುಡಾ ಕಾನೂನು ಶಾಖೆ ಟಿಪ್ಪಣಿಯಿಂದ ಬಹಿರಂಗಗೊಂಡಿದೆ.
ಹೌದು, ಮುಡಾ ಆಸ್ತಿ ಕಂಡ ಕಂಡವರ ಪಾಲಾಗಿರುವುದು ಮುಡಾ ಕಾನೂನು ಶಾಖೆ ಟಿಪ್ಪಣಿಯಿಂದ ಬಹಿರಂಗಗೊಂಡಿದೆ. ಮುಡಾಗೆ ಯಾವುದೇ ವಿಚಾರವಾಗಿ ಅರ್ಜಿ ಸಲ್ಲಿಸಿದರೂ ಸದರಿ ಅರ್ಜಿಯ ಸ್ವೀಕೃತಿ ಪತ್ರದಲ್ಲೇ ವಿಲೇವಾರಿಗೆ 21 ದಿನಗಳ ಕಾಲಮಿತಿ ಉಲ್ಲೇಖಿಸಲಾಗಿರುತ್ತದೆ. ಈ ಪ್ರಕರಣದಲ್ಲಿ ಸ್ವೀಕೃತಿ ಶಾಖೆಯಲ್ಲಿ ಅರ್ಜಿ ಸ್ವೀಕೃತವಾಗಿರುವ ಬಗ್ಗೆ ಯಾವುದೇ ಮಾಹಿತಿ ಸಂಖ್ಯೆ ನಮೂದಾಗಿಲ್ಲ. ಅಂದರೆ ಸದರಿ ಅರ್ಜಿ ನಿಯಮ ಬದ್ಧವಾಗಿ ಮುಡಾಗೆ ಸಲ್ಲಿಕೆಯಾಗಿಯೇ ಇಲ್ಲ. ನಿಯಮದಂತೆ ಸಲ್ಲಿಸಿದ ಅರ್ಜಿ ವಿಲೇವಾರಿಗೆ 21 ದಿನ ಕಾಲ ಮಿತಿ ಇದ್ದರೆ ಈ ಅರ್ಜಿಯನ್ನು ಕೇವಲ ಒಂದೇ ದಿನದಲ್ಲಿ ಮಂಡಿಸುವ ಮೂಲಕ ದಿನೇಶ್ ಕುಮಾರ್ ಪವಾಡವನ್ನೇ ಸೃಷ್ಟಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಅದು ಮಾತ್ರವಲ್ಲ. ಅರ್ಜಿ ಸಲ್ಲಿಕೆಯಾದ ಕೇವಲ 7 ದಿನಗಳಲ್ಲಿ 50:50ರ ಅನುಪಾತದಡಿ 23881 ಚದರಡಿ ನಿವೇಶನ ಮಂಜೂರಾತಿಗೆ ಆದೇಶ ಮಾಡುವ ಮೂಲಕ ಮುಡಾದಲ್ಲಿ ಇಷ್ಟು ತ್ವರಿತವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆಯೇ? ಎಂದು ಮೂಗಿನ ಮೇಲೆ ಬೆರಳಿಟ್ಟು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.
ಜಿ.ಟಿ ದಿನೇಶ್ ಕುಮಾರ್ ಅವರು ಯಾವುದೋ ರಾಜಕಾರಣಿಯೋ ಅಥವಾ ಅತ್ಯಂತ ಪ್ರಭಾವಿ ವ್ಯಕ್ತಿಯೋ ಸಲ್ಲಿಸಿದ ಅರ್ಜಿಯನ್ನು ಪ್ರಭಾವಕ್ಕೆ ಮಣಿದು ಅತ್ಯಂತ ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ ಎಂದರೆ ಅದು ಅಲ್ಲ. ಅರ್ಜಿದಾರ ಪ್ರಭಾವಿ ವ್ಯಕ್ತಿಯೂ ಅಲ್ಲ, ರಾಜಕಾರಣಿಯೂ ಅಲ್ಲ. ದಿನೇಶ್ ಕುಮಾರ್ ಹಿತಾಸಕ್ತಿಯ ಫಲವಾಗಿ ಇದು ಸಾಧ್ಯ ಎಂಬುದು ಕಾನೂನು ಶಾಖೆಯ ಟಿಪ್ಪಣಿಯಲ್ಲಿ ತಿಳಿದು ಬಂದಿದೆ.
ಮೈಸೂರಿನ ರಾಜೇಂದ್ರನಗರ ನಿವಾಸಿ ಸೈಯ್ಯದ್ ಜಾಫರ್ ಎಂಬುವರ ಮಗ ಸೈಯ್ಯದ್ ಯೂಸುಫ್ ಎಂಬುವರು 2023ರ ಫೆಬ್ರವರಿ 28ರಂದು ತಮಗೆ ಸೇರಿದ ಮೈಸೂರು ತಾಲೂಕು ಕಸಬಾ ಹೋಬಳಿ ಈರನಗೆರೆ ಗ್ರಾಮದ ಸರ್ವೆ ನಂಬರ್ 85/1ರಲ್ಲಿನ 2.06 ಎಕರೆ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಳ್ಳದೇ ಬಡಾವಣೆಯಾಗಿ ಉಪಯೋಗಿಸಿಕೊಂಡಿದೆ. ಆದ್ದರಿಂದ ತಮ್ಮ ಜಮೀನಿಗೆ ಪರಿಹಾರವಾಗಿ 50:50ರ ಅನುಪಾತದಡಿ ನಿವೇಶನ ನೀಡುವಂತೆ ಕೋರಿದ್ದರು.
ಆದರೆ ಸೈಯ್ಯದ್ ಯೂಸುಫ್, ಈ ಅರ್ಜಿಯನ್ನು ಮುಡಾದ ಸ್ವೀಕೃತಿ ಶಾಖೆಯಲ್ಲಿ ಸಲ್ಲಿಸಿರುವುದಕ್ಕೆ ಯಾವುದೇ ಪುರಾವೆ ಇಲ್ಲ. ಕಾರಣ, ಈ ಅರ್ಜಿಯಲ್ಲಿ ಸ್ವೀಕೃತಿ ಸಂಖ್ಯೆಯೇ ಇಲ್ಲ. ಹೀಗಾಗಿ ಸ್ವೀಕೃತಿ ಶಾಖೆಯಲ್ಲಿ ಅರ್ಜಿ ದಾಖಲಾಗಿಲ್ಲ ಆ ನಂತರ ಈ ಅರ್ಜಿಯು ಭೂಸ್ವಾಧೀನ ಶಾಖೆಗೆ ತಲುಪಿದ ಬಗ್ಗೆಯೂ ಯಾವುದೇ ಪುರಾವೆ ಇಲ್ಲ. ಕಾರಣ ಅರ್ಜಿಯಲ್ಲಿ ಭೂಸ್ವಾಧೀನ ಶಾಖೆಯ ವಿಷಯವಾಗಿ ಸಂಖ್ಯೆಯೇ ನಮೂದಾಗಿಲ್ಲ ಎಂಬುದು ಕಾನೂನು ಶಾಖೆಯ ಟಿಪ್ಪಣಿಯಿಂದ ತಿಳಿದುಬಂದಿದೆ.
ಅರ್ಜಿಯು ಆಯುಕ್ತರ ಕೈ ತಲುಪಿದ ಬೆನ್ನಲ್ಲೆ ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಮರುದಿನವೇ ಈ ಅರ್ಜಿಗೆ ಸ್ಪಂದಿಸಿ ಕಡತವನ್ನು ಮಂಡಿಸಿದ್ದಾರೆ. ಈ ಕಡತ ಮುಡಾದ ವಿವಿಧ ಶಾಖೆಗಳನ್ನು ಎಕ್ಸ್‌ಪ್ರೆಸ್ ವೇಗದಲ್ಲಿ ದಾಟಿ, ಅರ್ಜಿ ಸಲ್ಲಿಕೆಯಾದ 7ನೇ ದಿನ, 2023ರ ಮಾರ್ಚ್ 7ರಂದು ದಿನೇಶ್ ಕುಮಾರ್ ಅಧಿಕೃತ ಜ್ಞಾಪನದ ಮೇರೆಗೆ ಈರನಗೆರೆಯಲ್ಲಿ ಭೂಸ್ವಾಧೀನಪಡಿಸಿಕೊಳ್ಳದೇ ಮುಡಾ ಬಳಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ 23,881 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಮುಡಾದ ಸ್ವೀಕೃತಿ ಶಾಖೆಯಲ್ಲಿ ದಾಖಲು ಮಾಡಿಕೊಳ್ಳದೇ ಹಾಗೂ ಭೂಸ್ವಾಧೀನ ಶಾಖೆಯಲ್ಲಿಯೂ ಯಾವುದೇ ವಿಷಯ ವಹಿಯ ಸಂಖ್ಯೆಯನ್ನೂ ನಮೂದಿಸದೇ ಕೇವಲ 7 ದಿನಗಳಲ್ಲಿ 50:50ರ ಅನುಪಾತದಲ್ಲಿ ಒಟ್ಟು 23,881 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಕಾನೂನುಶಾಖೆಯ ಟಿಪ್ಪಣಿ ಶಂಕೆ ವ್ಯಕ್ತಪಡಿಸಿದೆ. ಈರನಗೆರೆ ಸರ್ವೆ ನಂಬರ್ 85/1ರಲ್ಲಿನ 2.06 ಎಕರೆ ಜಮೀನಿಗೆ ಸೈಯ್ಯದ್ ಯೂಸುಫ್ ಹೆಸರಿನಲ್ಲಿ ಆರ್‌ಟಿಸಿ ಇದೆ. ಅದರಲ್ಲಿ ಈ ಭೂಮಿಯನ್ನು ಅವರು ಕ್ರಯಕ್ಕೆ ಪಡೆದಿರುವುದಾಗಿ ನಮೂದಿಸಲಾಗಿದೆ. ಆರ್‌ಟಿಸಿಯಲ್ಲಿ ಹೀಗೆ ನಮೂದಾಗಿದ್ದರೂ ಯೂಸುಫ್ ಅವರಿಗೆ ಸದರಿ ಸ.ನಂ.ನ ಜಮೀನು ಕ್ರಯವಾಗಿರುವುದು ಎಲ್ಲೂ ಕಂಡುಬರುತ್ತಿಲ್ಲ. ಹೀಗಾಗಿ ಆರ್‌ಟಿಸಿಯಲ್ಲಿ ಇವರ ಹೆಸರು ನವದಾಗಿರುವುದು ಕೂಡ ಅನುಮಾನಾಸ್ಪದವಾಗಿರುತ್ತದೆ ಎಂದು ಕಾನೂನು ಶಾಖೆ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಮುಡಾಗೆ ಸಲ್ಲಿಸುವ ಅರ್ಜಿ ಜೊತೆಗೆ ದಾಖಲೆಗಳನ್ನು ನೀಡುವಾಗ ಅವುಗಳು ಜೆರಾಕ್ಸ್ ಪ್ರತಿಗಳಾಗಿದ್ದರೆ ದೃಢೀಕರಿಸಬೇಕು. ಆದರೆ, ಈ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಯಾವುದೇ ದಾಖಲೆಯು ದೃಢೀಕೃತ ಪ್ರತಿಯಲ್ಲ ಎಂದಿರುವ ಕಾನೂನು ಶಾಖೆ, ಕೇವಲ ಜೆರಾಕ್ಸ್ ಪ್ರತಿಗಳ ಆಧಾರದ ಮೇರೆಗೆ ಮೂಲ ಮಾಲೀಕರ ಬಗ್ಗೆ ಪರಿಶೀಲನೆಯನ್ನೂ ನಡೆಸದೇ ಏಕಾಏಕಿ ಕೇವಲ 7 ದಿನದಲ್ಲಿ 50:50ರ ಅನುಪಾತದಡಿ ನಿವೇಶನ ಮಂಜೂರಾತಿ ಆದೇಶ ಹೊರಡಿಸಿರುವುದನ್ನು ನೋಡಿದರೆ, ಅಂದಿನ ಆಯುಕ್ತ ದಿನೇಶ್ ಕುಮಾರ್ ಯಾವುದೇ ನಿಯಮಾವಳಿಯನ್ನು ಪಾಲಿಸದೇ ನಿವೇಶನ ಮಂಜೂರಾತಿ ಆದೇಶ ಹೊರಡಿಸಿರುವುದು ಕಂಡುಬಂದಿದೆ ಎಂದು ಟಿಪ್ಪಣಿ ಹೇಳಿದೆ.
Key words: muda, GT Dinesh Kumar, another, scam