ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಆ.31ಕ್ಕೆ ಮುಂದೂಡಿಕೆ
ಬೆಂಗಳೂರು,ಆಗಸ್ಟ್,29,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪಿಸಿ ಕಾಯ್ದೆ 17ಎ ಅಡಿ ಪೂರ್ವಾನುಮತಿ ಬೇಕು. 17ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಅಬ್ರಾಹಂ ದೂರು ವಜಾಗೊಳಿಸಿ ದಂಡ ವಿಧಿಸಬೇಕು. ರಾಜ್ಯಪಾಲರು ದೂರು ವಜಾಗೊಳಿಸಬೇಕು . ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ಅಬ್ರಾಹಂ ಅವರಿಗೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.
ತರಾತುರಿಯಲ್ಲಿ ವಿವೇಚನೆ ಬಳಸದೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇಬ್ಬರ ದೂರುಗಳ ಸಂಬಂಧ ಶೋಕಾಸ್ ನೋಟಿಸ್ ನೀಡಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆಗಸ್ಟ್ 31 ರ ಬೆಳಿಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿತು. ಹಾಗೆಯೇ ಈ ಹಿಂದಿನ ಮಧ್ಯಂತರ ಆದೇಶ ಮುಂದುವರೆಸಲು ಸೂಚನೆ ನೀಡಿದೆ. ಆಗಸ್ಟ್ 31 ರಂದು ಗವರ್ನರ್ ಪರ ಸಾಲಿಸಿಟರ್ ಜನರಲ್ ಮೆಹ್ತಾ ವಾದ ಮಂಡನೆ ಮಾಡಲಿದ್ದಾರೆ.
Key words: Muda scam, CM Siddaramaiah', application, adjourned