HomeBreaking NewsLatest NewsPoliticsSportsCrimeCinema

ಬಿಜೆಪಿ, ಜೆಡಿಎಸ್ ಮುಖಂಡರು ಮುಡಾದಿಂದ ಸೈಟ್ ಪಡೆದ ಬಗ್ಗೆ ದಾಖಲೆ ಸಮೇತ ವಿವರ ನೀಡಿದ ಸಿಎಂ ಸಿದ್ದರಾಮಯ್ಯ

01:31 PM Jul 26, 2024 IST | prashanth

ಮೈಸೂರು,ಜುಲೈ,26,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ  ಅಧಿವೇಶನದಲ್ಲಿ ಚರ್ಚೆಗೆ ಬಿಗಿಪಟ್ಟು ಹಿಡಿದು ಪ್ರತಿಭಟನೆಗಿಳಿದು ಇದೀಗ ಪಾದಯಾತ್ರೆಗೂ ಮುಂದಾಗಿರುವ ಬಿಜೆಪಿ ಜೆಡಿಎಸ್ ಗೆ ಸಿಎಂ ಸಿದ್ದರಾಮಯ್ಯ ಅವರು ದಾಖಲೆಗಳ ಸಮೇತ ತಿರುಗೇಟು ನೀಡಿದ್ದು ಅಲ್ಲದೆ ವಿಪಕ್ಷಗಳ ಮುಖಂಡರೂ ಸಹ ಮುಡಾದಿಂದ ಸೈಟ್ ಗಳನ್ನ ಪಡೆದ ಬಗ್ಗೆ ವಿವರ ನೀಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಪಾರ್ಲಿಮೆಂಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ, ಬಿಜೆಪಿ ಜೆಡಿಎಸ್ ಸಂಸದರು ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಪ್ರಶ್ನೆ ಮಾಡಿಲ್ಲ ಏಕೆ?  ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು , ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ . ನಾವೇನು ಇಂಥಾ ಜಾಗದಲ್ಲೇ ನಿವೇಶನ ಕೇಳಿಲ್ಲ. ಬಿಜೆಪಿಯವರ ಅವಧಿಯಲ್ಲೇ ಅವರೇ ನಿರ್ಣಯ ಕೈಗೊಂಡು ಕೊಟ್ಟಿರುವ ನಿವೇಶನ ಇದು. ಮತ್ತೇಕೆ ರಾಜ್ಯದ ಜನತೆಯ ಮುಂದೆ ಸುಳ್ಳು ಹೇಳಿ ಸಿಕ್ಕಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕುಟುಂಬದಲ್ಲಿ ಅನ್ಯೋನ್ಯರಾಗಿದ್ದವರನ್ನು ಪರಸ್ಪರ ಎತ್ತಿ ಕಟ್ಟಿ ಮನೆ ಮುರುಕ ರಾಜಕಾರಣ ಮಾಡಿದರೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಇದರಲ್ಲಿ ನನ್ನದಾಗಲಿ, ನಮ್ಮ ಪತ್ನಿಯವರದ್ದಾಗಲಿ, ನಮ್ಮ ಬಾಮೈದುನನ ಪಾತ್ರ ಎಲ್ಲಿದೆ ಹೇಳಿ? ಎಂದು ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಮುಂದಿಟ್ಟು ಪ್ರಶ್ನಿಸಿದರು.

ಬಿಜೆಪಿ ಜೆಡಿಎಸ್ ಮುಖಂಡರು ಮೂಡಾದಿಂದ ಪಡೆದಿರುವ ಸೈಟ್ ಗಳ ವಿವರಗಳನ್ನ ಸಿಎಂ ಸಿದ್ದರಾಮಯ್ಯ ದಾಖಲೆ ಸಮೇತ ಬಹಿರಂಗಪಡಿಸಿದರು.  ದಾಖಲೆ ಹೀಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು..

ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ.  ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಆಡಳಿತ ಪಕ್ಷದ ಶಾಸಕರು ರಾಜ್ಯದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದರು. ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದರು.

ಬಿಜೆಪಿ ಜೆಡಿಎಸ್‌ನವರ ಆರೋಪಗಳಿವು. ಇದಕ್ಕೆ ದಾಖಲೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದ್ದೇನೆ. ಕುಟುಂಬದವರನ್ನೇ ಎತ್ತಿಕಟ್ಟಿ ಕೊಳಕು ಮನೆ ಮುರುಕ ರಾಜಕಾರಣಕ್ಕಿಳಿದಿರುವುದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ನಿಂಗ ಬಿನ್ ಜವರ ಇವರ ವಾರಸುದಾರ ಪುತ್ರರಲ್ಲೊಬ್ಬರಿಂದ ಬಿ.ಎಂ ಮಲ್ಲಿಕಾರ್ಜುನ್ ರವರು ಭೂಮಿ ಖರೀದಿ ಮಾಡಿದ್ದು, ಈ ಕ್ರಯಕ್ಕೆ ಪಿ.ಟಿ.ಸಿ.ಎಲ್. ಕಾಯ್ದೆ ಅನ್ವಯಿಸುವುದಿಲ್ಲವೆ?

2-8-1935 ರಲ್ಲಿ ಜವರನ ಮಗ ನಿಂಗ ಎನ್ನುವವರು  ಮೈಸೂರು ತಾಲ್ಲೂಕು ಕಛೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು  ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ.  ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ.    “ಕೆಸರೆ ಗ್ರಾಮದ ಸ. ನಂ 464 ರ 3.16 [ ಜಮೀನು] 3 ರೂಪಾಯಿ 8 ಆಣೆ ಉಳ್ಳ ಜಮೀನು  ತಾಲ್ಕು ರಿಂದ 27-9-35  ನೇ  ಎಡಿ 12 ನೇ ಮೈಸೂರು  ಹುಕುಂ ಮೇರೆ  ಬೀಳು ಹರಾಜು ಮಾಡಿಸಲಾಯ್ತು.   3 ರೂಪಾಯಿ ಹರಾಜು. 1 ರೂಪಾಯಿ ನಿಂಗ ಬಿನ್ ಜವರ, ಇದರ ಮೇಲೆ  ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು” ಎಂದು ದಾಖಲಿಸಲಾಗಿದೆ.  13-10-1935 ರಂದು  ‘ Sale is confirmed”  ಎಂದು ನಮೂದಿಸಿದ್ದಾರೆ.

ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ  ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ.

ಖರೀದಿ ಮಾಡಲು ಅವರು ಸರ್ಕಾರದಿಂದ ಅನುಮತಿ ಪಡೆದಿದ್ದರೆ?

ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.

ಈ ಜಮೀನುಗಳನ್ನು ಖರೀದಿ ಮಾಡುವಾಗ ವಾರಸುದಾರರನ್ನು ಈ ಭೂ ಕ್ರಯದಿಂದ ಏಕೆ ಹೊರಗಿಡಲಾಗಿತ್ತು? ಈ ಕ್ರಯವನ್ನು ಕಾನೂನಿನ ಪ್ರಕಾರ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಬಿಜೆಪಿಯವರು ಎತ್ತಿದ್ದಾರೆ.

10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು.  ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ  ಮಂಜುನಾಥ್‌ಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ.  3 ನೆಯವರು ದೇವರಾಜು ಎನ್ನುವವರು. [ಈ ದೇವರಾಜು ಎನ್ನುವವರೆ  ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು  ಮಾರಾಟ ಮಾಡಿರುವುದು]. ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.

ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು  ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹೆಳಿಕೆಯಲ್ಲಿ ಹೀಗೆ ಬರೆಯಲಾಗಿದೆ. “ ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ರೂಬು ರೂಬು. ಡಿಟೊ ಮೈಸೂರು ಸಿಟಿ ಗಾಂಧಿನಗರ 8 ನೇ ಕ್ರಾಸ್ , ಮನೆ ನಂ 4038 ರ ನಿವಾಸಿಗಳಾದ  ಲೇಟ್ ನಿಂಗಯ್ಯ ಬಿನ್ ಜವರ ರವರ ಮೊದಲನೆ ಮಗ ಮಲ್ಲಯ್ಯ ಮತ್ತು ಲೇಟ್ ಮೈಲಾರಯ್ಯನವರ ಹೆಂಡತಿ ಪುಟ್ಟಗೌರಮ್ಮ ಹಾಗೂ ಮಗ  ಎಂ. ಮಂಜುನಾಥಸ್ವಾಮಿ ಆದ ನಾವುಗಳು ಹೆಳಿ ಬರೆಸಿದ ಹೇಳಿಕೆ.

ಅದಾಗಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464 ರ 3-16  ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ರವರ ಮೂರನೆ ಮಗ ಜೆ.ದೇವರಾಜು ನಮೂನೆ 19 ರ ಮೂಲಕ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ . ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು ಅವರು ಫವತಿಯಾಗಿ ನಮ್ಮಗಳಿಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲವೆಂದು ಹೇಳಿ ಬರೆಯಿಸಿದ ಹೇಳಿಕೆ. ಓದಿಸಿ ಕೇಳಿ ಸರಿ ಎಂದು ಒಪ್ಪಿ ರುಜು ಮಾಡಿರುತ್ತೇವೆ. ಮಲ್ಲಯ್ಯ, ಪುಟ್ಟಗೌರಮ್ಮ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುತ್ತಾರೆ. ಎಂ.ಮಂಜುನಾಥಸ್ವಾಮಿ ಇಂಗ್ಲಿಷಿನಲ್ಲಿ ಸಹಿ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ.

ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮುಡಾದಿಂದ ಅಭಿವೃದ್ಧಿ ಹೊಂದಿದ ಜಾಗಗಳು ಎಷ್ಟು ಇವೆ?  ಅಂತಹ ಡಿ-ನೋಟಿಫಿಕೇಶನ್ ಪ್ರಸ್ತಾವನೆಗಳಿಗೆ ಸರ್ಕಾರದ ಅನುಮತಿ ಪಡೆಯಲಾಗಿತ್ತೆ?

ಪ್ರತಿಕ್ರಿಯೆ: ಅದಕ್ಕೂ ಮೊದಲು ಪ್ಯಾರಾ ನಂ.6 ರಲ್ಲಿ ಬಿ.ಜೆಪಿ ಯವರು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ಮನವಿ/ ದೂರಿನಲ್ಲಿ ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದಾಗ  ಕಂಡು ಬಂದ ಸತ್ಯಾಂಶಗಳು:

ಬಿಜೆಪಿ ಯವರು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

ಪ್ರತಿಕ್ರಿಯೆ:

1.ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬುದೆ ಕುರಿತು ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಇಷ್ಟಕ್ಕೂ ಈ ಜಮೀನುಗಳನ್ನು 18-05-1998 ರಲ್ಲಿ ಕೈಬಿಡಲಾಗಿದೆ.

2.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.

3.ಹಾಗಾಗಿ ಭುಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ.

4.ಹಾಗಾಗಿ ಬಿಜೆಪಿಯವರು ಎತ್ತಿರುವ ಈ ಪ್ರಶ್ನೆ ಕೂಡ ಅಸಂಗತ ಪ್ರಶ್ನೆಯಾಗಿದೆ.

  1. ಭೂಮಿಯನ್ನು ಸಂಪೂರ್ಣವಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಡಿ-ನೋಟಿಫಿಕೇಶನ್ ಮಾಡಬಹುದೇ?
  2. ಅಂತಹ ಅಭಿವೃದ್ಧಿ ಹೊಂದಿದ ಅಥವಾ ಭಾಗಶಃ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೇ? ಅದನ್ನು ಡಿ-ನೋಟಿಫೈ ಮಾಡಿದಾಗ ಭೂಮಿಯನ್ನು ಯಾರು ಹೊಂದಿದ್ದರು?
  3. ಸರ್ಕಾರದ ಅನುಮತಿಯಿಲ್ಲದೆ 50:50 ಯೋಜನೆಯನ್ನು ಹೇಗೆ ಜಾರಿಗೆ ಬಂತು?

ಪ್ರತಿಕ್ರಿಯೆ:

ಇದರಲ್ಲಿ ಕಾನೂನು ವಿದ್ಯಾರ್ಥಿಯಾದ ನನಗೆ ಹಾಗೂ 40 ವರ್ಷಗಳಿಂದ ಸುಧೀರ್ಘ ರಾಜಕಾರಣದಲ್ಲಿ ಇರುವ ನನಗೆ ಒಂದು ನಯಾಪೈಸೆಯಷ್ಟು ತಪ್ಪುಗಳೂ ಕಂಡುಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಮಾಧ್ಯಮದ ಮೂಲಕ ಈ ನಾಡಿನ ಜನರ ಮುಂದೆ ಇಡುತ್ತಿದ್ದೇನೆ.  ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ಜಸ್ಟೀಸ್ ಪಿ.ಎನ್. ದೇಸಾಯಿ ಯವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ.  ಬಿಜೆಪಿ, ಜೆಡಿಎಸ್ ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

Key words: muda scam, CM Siddaramaiah, documents, BJP, JDS

Tags :
BJPCM SiddaramaiahdocumentsJDSMuda scam
Next Article