For the best experience, open
https://m.justkannada.in
on your mobile browser.

ಮುಡಾ ಹಗರಣ: ಡಿ.ಬಿ. ನಟೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ದವೂ ಕ್ರಮಕ್ಕೆ ರಘು ಕೌಟಿಲ್ಯ ಆಗ್ರಹ

11:44 AM Sep 06, 2024 IST | prashanth
ಮುಡಾ ಹಗರಣ  ಡಿ ಬಿ  ನಟೇಶ್  ಮತ್ತು ಇತರೆ ಅಧಿಕಾರಿಗಳ ವಿರುದ್ದವೂ ಕ್ರಮಕ್ಕೆ ರಘು ಕೌಟಿಲ್ಯ ಆಗ್ರಹ

ಮೈಸೂರು,ಸೆಪ್ಟಂಬರ್,6,2024 (www.justkannada.in): ಮುಡಾ ಹಗರಣದ ಮೂಲ ರೂವಾರಿ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಹಾಗೂ ಈ ಇಬ್ಬರೊಂದಿಗೆ ಸೇವೆ ಸಲ್ಲಿಸಿ ಹಗರಣ ನಿರ್ಮಾಣದ ಕೂಟದಲ್ಲಿ ಕೈ ಜೋಡಿಸಿರುವ ಕಾರ್ಯದರ್ಶಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಹಶೀಲ್ದಾರರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೂಡಲೇ ಅಮಾನತುಗೊಳಿಸಿ ಇವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಆಗ್ರಹಿಸಿದ್ದಾರೆ.

ಈ ಕುರಿತಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಎಂ, ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಉಮಾಶಂಕರ್ ಅವರಿಗೆ ಪತ್ರ ಬರೆದಿರುವ ಬಿಜೆಪಿ ಮುಖಂಡ ರಘು ಕೌಟಿಲ್ಯ,   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆ ನಡೆದಿರುವ ಅನೇಕ ಅವ್ಯವಹಾರಗಳು ಹಾಗೂ ನಿಯಮ ಬಾಹಿರ ನಿರ್ಧಾರಗಳ ವಿರುದ್ಧ ಸಲ್ಲಿಕೆಯಾದ ದೂರುಗಳ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ತಾಂತ್ರಿಕ ಸಮಿತಿ ಸರ್ಕಾರಕ್ಕೆ ದಿ: 3.11.2023ರಂದು ಸರ್ಕಾರಕ್ಕೆ ಸುಧೀರ್ಘ ವಿವರವನ್ನು ಒಳಗೊಂಡ ವರದಿಯನ್ನು ಸಲ್ಲಿಸಿ ಮುಡಾದಲ್ಲಿ ನಡೆದಿರುವ ಹಗರಣಗಳ ಕುರಿತು ಮಾಹಿತಿ ಒದಗಿಸಲಾಗಿತ್ತು. ಅದರಲ್ಲೂ ಶೇ 50:50 ಅನುಪಾತದ ಹೆಸರಿನಲ್ಲಿ ನಿಯಮ ಬಾಹಿರವಾಗಿ ಸಾವಿರಾರು ನಿವೇಶವನ್ನು ವಿತರಿಸಿ ಅಕ್ರಮವಾಗಿ ಕ್ರಯ ಮಾಡಿಕೊಟ್ಟು ಪ್ರಾಧಿಕಾರದ ಆಸ್ತಿ ಹಾಗೂ ಸಾವಿರಾರು ಕೋಟಿ ರೂಪಾಯಿಯಗಳ ಆರ್ಥಿಕ ನಷ್ಟ ಉಂಟಾಗಿರುವುದರ ಕುರಿತು ಆಧಾರಸಹಿತವಾಗಿ ವರದಿ ಸಲ್ಲಿಸಿತ್ತು.

ಮೇಲಿನ ಕಾರಣದ ಹಿನ್ನೆಲೆಯಲ್ಲಿ ಸುಧೀರ್ಘ ವಿಳಂಬ ಧೋರಣೆ ಅನುಸರಿಸಿ ದಿನಾಂಕ 31.8.2024 ರಂದು ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಆದೇಶ ಹೊರಡಿಸಲಾಗಿದೆ. ಆದರೆ, ಸದ್ಯ ಈಗಾಗಲೇ ಪ್ರಚಲಿತದಲ್ಲಿರುವ ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಅಂದಾಜು 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 10 ಸಾವಿರ ನಿವೇಶನಗಳ ಅಕ್ರಮ ವಿತರಣೆಯ ನಿಯಮಬಾಹಿರ ಲೂಟಿಕೊರತನದ ಪ್ರಕರಣದ ಮೂಲ ರೂವಾರಿ ಎಂದು ಸಾಕ್ಷಿಕರಿಸಲಾಗಿರುವ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಹಾಗೂ ಹಗರಣದ ಭಾಗಿದಾರಸ್ತ ಇತರ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವನ್ನು ಜರಗಿಸಿರುವುದಿಲ್ಲ. ದಿ. 20.11.2020 ರಂದು ಮುಡಾದಲ್ಲಿ ನಿರ್ಣಯ ಕೈಗೊಳ್ಳದೇ ಮುಂದೂಡಲಾಗುವ ಶೇ 50:50ರ ಅನುಪಾತದ ನಿವೇಶನ ವಿತರಣೆಯ ವಿಷಯವನ್ನು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಯ ನಡಾವಳಿ ದಾಖಲಿಸಿ ಇದೇ ಆಧಾರದ ಮೇಲೆ ಸಾವಿರಾರು ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚುವ ಕುಕೃತ್ಯದ ಕಾರಣಕರ್ತರಾದ ಡಿ.ಬಿ. ನಟೇಶ್ ಅವರ ವಿರುದ್ಧ ಈವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಆಶ್ಚರ್ಯ ರಾಜ್ಯದ ಜನತೆಯನ್ನು ಕಾಡುತ್ತಿದೆ.  ಇದೇ ನಟೇಶ್ ಅವರು ಮುಖ್ಯಮಂತ್ರಿಗಳ ಧರ್ಮಪತ್ನಿ ಅವರ ಹೆಸರಿನಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಿಕೊಡುವ ವಿಷಯವನ್ನು ಪ್ರಾಧಿಕಾರದ ಸಭೆಗೂ ತಾರದೇ ಸರ್ಕಾರದ ಅನುಮೊದನೆಯನ್ನು ಪಡೆಯದೇ ಏಕಪಕ್ಷಿಯವಾಗಿ ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸುತ್ತಾರೆ.

ನಿಯಮ ಬಾಹಿರವಾಗಿ ಮಂಜೂರಾತಿ ಪತ್ರ ಹಾಗೂ ಕ್ರಯ ಪತ್ರವನ್ನು ಮಾಡಿಕೊಟ್ಟು ಅತ್ಯಂತ ಪ್ರತಿಷ್ಠಿತ (ವಿಜಯನಗರ) ಬಡಾವಣೆಯ 14 ನಿವೇಶನಗಳು ಧಾರೆ ಎರೆದು ಕೊಡುತ್ತಾರೆ. ಇಲ್ಲಿಂದ ಆರಂಭವಾಗುವ ಇವರ ಅಕ್ರಮ ನಿವೇಶನಗಳ ಲೂಟಿಕೊರತನ ಕಳೆದ ಜೂನ್ ತಿಂಗಳ ಕೊನೆಯವರೆಗೂ ಎಗ್ಗಿಲ್ಲದೇ ಸಾಗುತ್ತದೆ. ಸಾಮಾಜಿಕ ಕಾರ್ಯಕರ್ತರು ನಮ್ಮ ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸಿದ ಪರಿಣಾಮವಾಗಿ ಮುಡಾ ಹಗರಣ ಬಗೆದಷ್ಟು ಈ ಕ್ಷಣಕ್ಕೂ ಹೊರಬರುತ್ತಲೇ ಇದೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಿಲ್ಲಾಧಿಕಾರಿಗಳು ನೀಡುವ ನಿರ್ದೇಶನವನ್ನು ಮೂಲೆಗೆ ತಳ್ಳಿ ಮೈಸೂರಿನ ಮುಡಾದಲ್ಲಿ ವಸತಿ ರಹಿತ ಜನರಿಗೆ ಸಲ್ಲಬೇಕಾದ ಸಾವಿರಾರು ನಿವೇಶನಗಳನ್ನು ಮುಡಾದ ಅಧಿಕಾರಿಗಳು ಹಾಗೂ ನೆಲಬಾಕ ಮಾಫಿಯಾಗಳು ಈಗಾಗಲೇ ನುಂಗಿಹಾಕಿವೆ. ಇದು ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಪ್ರಶ್ನೆಯಾಗಿದ್ದು ಈಗಾಗಲೇ ಈ ನಿಟ್ಟಿನಲ್ಲಿ ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಿ ನಗರಾಭಿವೃದ್ಧಿ ಇಲಾಖೆ ಹಾಗೂ ತಾವು ಈ ಹಗರಣ ಹುತ್ತದಂತೆ ಬೆಳೆದು ನಿಲ್ಲಲು ಕಾರಣರಾಗಿದ್ದೀರಿ.

ಈ ಕೂಡಲೇ ಹಿಂದೆ ನಾವು ಒತ್ತಾಯಿಸಿದಂತೆ ಅಕ್ರಮ ವಿತರಣೆಯ ಶೇ. 50:50ರ ಅನುಪಾತದಲ್ಲಿ ಕ್ರಯವಾಗಿರುವ ಹಾಗೂ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಬದಲಿ ನಿವೇಶನಗಳನ್ನು ಈ ಕೂಡಲೇ ಅಧಿಸೂಚನೆ ಹೊರಡಿಸಿ ರದ್ದುಪಡಿಸಬೇಕು. ಅದರ ಜೊತೆಗೆ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿದಂತೆ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಹಾಗೂ ಈ ಇಬ್ಬರೊಂದಿಗೆ ಸೇವೆ ಸಲ್ಲಿಸಿ ಹಗರಣ ನಿರ್ಮಾಣದ ಕೂಟದಲ್ಲಿ ಕೈ ಜೋಡಿಸಿರುವ ಕಾರ್ಯದರ್ಶಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಹಶೀಲ್ದಾರರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೂಡಲೇ ಅಮಾನತು ಗೊಳಿಸಿ ಇವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.

ಇನ್ನೂ ವಿಳಂಬ ನೀತಿ ಅನುಸರಿಸಿದರೆ ಮುಖ್ಯಮಂತ್ರಿಗಳಿಗೆ 14 ನಿವೇಶನಗಳನ್ನು ಬಳುವಳಿಯಾಗಿ ನೀಡಿದ ಅಧಿಕಾರಿಗಳನ್ನು ರಕ್ಷಿಸುತ್ತಿದ್ದೀರಿ ಎಂಬ ನಿರ್ಣಯಕ್ಕೆ ಬಂದು ನಾವು ಮುಂದಿನ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ರಘು ಕೌಟಿಲ್ಯ ಎಚ್ಚರಿಕೆ ನೀಡಿದ್ದಾರೆ.

Key words: Muda Scam, D.B. Natesh, suspend, Raghu Kautilya , letter

Tags :

.