For the best experience, open
https://m.justkannada.in
on your mobile browser.

ಮುಡಾ ನಿವೇಶನ ಹಂಚಿಕೆ: ಬಿಜೆಪಿಯಿಂದ ರಾಜಕೀಯ ಪ್ರೇರಿತ ಆರೋಪಗಳು; ಸಿಎಂ ಸಿದ್ದರಾಮಯ್ಯ

05:30 PM Jul 04, 2024 IST | prashanth
ಮುಡಾ ನಿವೇಶನ ಹಂಚಿಕೆ  ಬಿಜೆಪಿಯಿಂದ ರಾಜಕೀಯ ಪ್ರೇರಿತ ಆರೋಪಗಳು  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ 04,2024 (www.justkannada.in):  ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು  ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ. ವಿಷಯವೇ ಇಲ್ಲ. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ. ಹಾಗಿದ್ದಲ್ಲಿ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಲಿ.   ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ ಎಂದರು.

ಬಿಜೆಪಿ ಅಧಿಕಾರದಲ್ಲಿತ್ತು

ನಿವೇಶನ ನೀಡಿದಾಗ  2021 ನೇ ಇಸವಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3 ನೇ ಅಥವಾ 4 ನೇ  ಹಂತದಲ್ಲಿ ಕೊಡಿ ಎಂದು ಕೇಳಲಿಲ್ಲ. ನಮಗೆ ಪರ್ಯಾಯವಾಗಿ  50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ  ಕೊಡಿ ಎಂದು ಹೇಳಿದ್ದೇವೆ. ಇದು ರಾಜಕೀಯ ಪ್ರೇರಿತ ಆಪಾದನೆ ಎಂದರು.

ನಿವೇಶನ ಕೊಟ್ಟಿರುವುದು ತಪ್ಪು ಎಂದರೆ ಪರಿಹಾರ ಕೊಡಲಿ

ಭೂ ಸ್ವಾಧೀನವಾದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆ ಎಂದು ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾವು ಇಂಥ ಕಡೆಯೇ ನಿವೇಶನ ಕೊಡಿ ಎಂದು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023 ರಲ್ಲಿ ಸಚಿವರು 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು  ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ  ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ.  ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು  ನನಗೆ ತಿಳಿದಿಲ್ಲ. ನನಗೆ 62 ಕೋಟಿ ಕೊಟ್ಟುಬಿಡಲಿ ಎಂದರು.

ನಗರಾಭಿವೃದ್ಧಿ ಸಚಿವರು ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತವನ್ನು ತೆಗೆದುಕೊಂಡು ಬಂದಿದ್ದಾರೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿ ಕಡತ ತಂದಿಲ್ಲ ಎಂದರು.

Key words: Muda, scam, Politically, allegations, CM Siddaramaiah

Tags :

.