ಮುಡಾ ಹಗರಣದಿಂದ ಪಾರಾಗಲು ದೇಸಾಯಿ ಆಯೋಗ ರಚನೆ- ಕೇಂದ್ರ ಸಚಿವ ಹೆಚ್.ಡಿಕೆ ಟೀಕೆ
ಮೈಸೂರು,ಜುಲೈ,28,2024 (www.justkannada.in): ಮುಡಾ ಹಗರಣದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ದೇಸಾಯಿ ಆಯೋಗದ ವರದಿಯನ್ನು ತಗೊಂಡು ನೆಕ್ಕಲು ಆಗುತ್ತಾ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು. ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಸಭೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಜಿ. ಡಿ ಹರೀಶ್ ಗೌಡ, ಎಂ ಎಲ್ಸಿಗಳಾದ ಸಿ. ಎನ್ ಮಂಜೇಗೌಡ, ವಿವೇಕಾನಂದ, ಮಾಜಿ ಸಚಿವ ಸಾ. ರಾ ಮಹೇಶ್, ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು. ಈ ಮಧ್ಯೆ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಗೆ ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಗೈರಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ , ಮುಡಾ ಪ್ರಕರಣದಿಂದ ಬಚಾವ್ ಆಗುವ ಸಲುವಾಗಿಯೇ ದೇಸಾಯಿ ನೇತೃತ್ವದ ಆಯೋಗ ರಚನೆ ಮಾಡಿದ್ದಾರೆ. ಈ ಸರ್ಕಾರ ಹಾಗೂ ಸಿದ್ದರಾಮಯ್ಯ ಒಂದು ಕ್ಷಣವೂ ಮುಂದುವರಿಯಬಾರದು ಎಂಬುದು ನನ್ನ ಆಶಯ. ಸಿದ್ದರಾಮಯ್ಯ ಪತ್ನಿ 50 ಅಲ್ಲ 100 ನಿವೇಶನ ಬೇಕಾದರೂ ಪಡೆದುಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾನೂನುಬದ್ದವಾಗಿ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ. ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ. 16/2 ಆಗಿರುವ ಜಮೀನನ್ನು ಇವರು ಹೇಗೆ ಖರೀದಿ ಮಾಡಿದರು. ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದಾಗ ಡಿಸಿ ಕೃಷಿ ಭೂಮಿ ಎಂದು ವರದಿ ಕೊಟ್ಟಿದ್ದಾನೆ. ಆಗ ಡಿಸಿ ಏನು ಮಣ್ಣು ತಿನ್ನುತ್ತಿದ್ನಾ? ಸ್ಪಾಟ್ ಗೆ ಹೋಗಿ ನೋಡಿದ್ನಾ? ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹ. ಮುಡಾ ಹಗರಣದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ನಾನು ಮುಡಾದಿಂದ ಯಾವುದೇ ನಿವೇಶನ ಪಡೆದಿಲ್ಲ.
ಮುಡಾದದಿಂದ ಹೆಚ್.ಡಿಕೆ ಸೈಟ್ ಪಡೆದಿದ್ದಾರೆಂಬ ಆರೋಪ ಕುರಿತು ಸ್ಪಷ್ಟನೆ ನೀಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಮುಡಾದಿಂದ ಯಾವುದೇ ನಿವೇಶನ ಪಡೆದಿಲ್ಲ. 1984ರಲ್ಲಿ ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದೇನೆ. 37 ಸಾವಿರ ಹಣವನ್ನು ಕಟ್ಟಿದ್ದೇನೆ. 2006 ರಲ್ಲಿ ನಾನು ಸಿಎಂ ಆಗಿದ್ದಾಗ ಯಾರಿಗಾದರೂ ಹೇಳಿದ್ದರೆ ಮನೆಗೆ ಫೈಲ್ ತಂದು ಕೊಡುತ್ತಿದ್ದರು. ಆದರೆ ಆಗಲೂ ಪ್ರಭಾವ ಬಳಸಿ ನಿವೇಶನ ಪಡೆಯಲಿಲ್ಲ. ಮುಡಾದಲ್ಲಿ ನಿವೇಶನ ಸಿಗದಿರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಅದನ್ನೇ ದೊಡ್ಡದು ಮಾಡುತ್ತಿದ್ದರು. ಆದರೂ ಕಾಂಗ್ರೆಸ್ ನವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಂಪ್ಲೆಂಟ್ ಕೊಡೋಕೆ ಬೇರೆ ಯಾರೂ ಸಿಗಲಿಲ್ವ ? ನಿಮ್ಮ ಪೊನ್ನಣ್ಣ ಸರಿಯಾಗಿ ಹೇಳಿಕೊಡಲಿಲ್ವ ?
ಇ.ಡಿ. ವಿರುದ್ಧ ಎಫ್‌ಐಆರ್ ದಾಖಲು ಕುರಿತು ಲೇವಡಿ ಮಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಾಲ್ಮೀಕಿ ನಿಗಮದ ವಿಚಾರವಾಗಿ ಆ ಕಲ್ಲೇಶ ಅನ್ನುವವನ ಕೈಯಲ್ಲಿ ಕಂಪ್ಲೆಂಟ್ ಕೊಡಿಸಿದ್ದೀರಿ. ಆತನ ಹಿನ್ನೆಲೆ ಏನು ? ಸಿದ್ದರಾಮಯ್ಯ ಅವರೇ ನೀವೇ ಕಲ್ಲೇಶ್ ನನ್ನು ಜೂನ್ ತಿಂಗಳಲ್ಲಿ ಸಸ್ಪೆಂಡ್ ಮಾಡಿದ್ದೀರಿ. ಇನ್ನೂ ಒಂದು ತಿಂಗಳೂ ಆಗಿಲ್ಲ. ಕೇಂದ್ರ ಸರ್ಕಾರದ 40 ಕೋಟಿ ರೂ. ಅನುದಾನ ಬಳಕೆ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಅಂಥವನಿಂದ ಕಂಪ್ಲೆಂಟ್ ಕೊಡಿಸಿದ್ದೀರಿ. ಕಂಪ್ಲೆಂಟ್ ಕೊಡೋಕೆ ಬೇರೆ ಯಾರೂ ಸಿಗಲಿಲ್ವ ? ನಿಮ್ಮ ಪೊನ್ನಣ್ಣ ಸರಿಯಾಗಿ ಹೇಳಿಕೊಡಲಿಲ್ವ ? ಇಂಥ ಸಲಹೆ ಕೊಡುವವನಿಗೆ ಎಸ್ಕಾರ್ಟ್ ಬೇರೆ ಕೊಡ್ತೀರಿ. ಇದೆಯೇ ನಿಮ್ಮ ಆಡಳಿತ ವೈಖರಿ ? ಎಂದು ಪ್ರಶ್ನಿಸಿದರು.
Key words: Muda scam, siddaramaiah Desai Commission, HDK