For the best experience, open
https://m.justkannada.in
on your mobile browser.

ಮುಡಾ ಹಗರಣ: ಸಿದ್ದರಾಮಯ್ಯರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ- ಹೆಚ್.ಎ ವೆಂಕಟೇಶ್

03:04 PM Jul 06, 2024 IST | prashanth
ಮುಡಾ ಹಗರಣ  ಸಿದ್ದರಾಮಯ್ಯರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ  ಹೆಚ್ ಎ ವೆಂಕಟೇಶ್

ಮೈಸೂರು,ಜುಲೈ,6,2024 (www.justkannada.in): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ  ಈ ಕುರಿತು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಎ ವೆಂಕಟೇಶ್ , ಮುಖ್ಯಮಂತ್ರಿ ಪತ್ನಿ ಪಾರ್ವತಿ ಸಿದ್ದರಾಮಯ್ಯರವರಿಗೆ 3 ಎಕರೆ 16 ಗುಂಟೆ ಅಂದರೆ 1,50,000 ಚದರ ಅಡಿ ಜಾಗ ಅವರ ಹೆಸರಿನಲ್ಲಿತ್ತು. 38,000 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಮುಡಾ ಮಂಜೂರು ಮಾಡಿದೆ. ಇದೂ ಕೂಡ ಮುಡಾ ನಿಯಮದ ಅನ್ವಯ ಮಂಜೂರು ಮಾಡಿದೆ. 2021 ರಲ್ಲಿ ನಿವೇಶನ ಪಡೆದಾಗ ಅವರು ಸಿದ್ದರಾಮಯ್ಯರವರು ಮುಖ್ಯಮಂತ್ರಿ ಯಾಗಿರಲಿಲ್ಲ, ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆಯಲ್ಲ. ಆದ ಕಾರಣ ಮುಖ್ಯಮಂತ್ರಿ ಅಧಿಕಾರ ದುರುಪಯೋಗದ ಪ್ರಶ್ನೆ ಉದ್ಭವಿಸುವುದಿಲ್ಲ. ಮುಖ್ಯಮಂತ್ರಿ ಪತ್ನಿ ಎಂಬ ಕಾರಣಕ್ಕೆ ಬಹಳ ಚರ್ಚೆಯಾಗುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯನವರಿಗೂ ಈ ಪ್ರಕರಣಕ್ಕೂ ಸಂಬಂಧವಿರುವುದಿಲ್ಲ. ಸಿದ್ದರಾಮಯ್ಯರವರ ಕುಟುಂಬ ಅಣ್ಣ, ತಮ್ಮ ಅಥವಾ ಯಾರೂ ಭಾಗಿಯಿಲ್ಲ ಇದೂ ಸಿದ್ದರಾಮಯ್ಯನವರ ಮಾವನ ಕುಟುಂಬಕ್ಕೆ ಸಂಬಂಧಿಸಿದ ವಿಚಾರ. 2004 ರಲ್ಲಿ ಪಾರ್ವತಿ ಸಿದ್ದರಾಮಯ್ಯನವರ ಅಣ್ಣನಾದ ಮಲ್ಲಿಕಾರ್ಜುನ್ ರವರು ಖರೀದಿ ಮಾಡಿದ್ದಾರೆ. 2010 ರಲ್ಲಿ ಸಹೋದರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪಾರ್ವತಿ ಸಿದ್ದರಾಮಯ್ಯನವರು ಬಂಡವಾಳ ಹೂಡಿ ಖರೀದಿ ಮಾಡಿರುವುದಿಲ್ಲ ಅಥವಾ ಸಿದ್ದರಾಮಯ್ಯರವರಾಗಲಿ ಅವರ ಕುಟುಂಬವಾಗಲಿ ಹಣ ಕೊಟ್ಟಿ ಖರೀದಿಸಿದ್ದಲ್ಲ. ಹೀಗಾಗಿ ಸಿದ್ದರಾಮಯ್ಯನವರಿಗೆ ಈ ಪ್ರಕರಣ ಸಂಬಂಧಿಸಿದ್ದಲ್ಲ ಎಂದು ಹೆಚ್.ಎ ವೆಂಕಟೇಶ್ ಸ್ಪಷ್ಟನೆ ನೀಡಿದರು.

ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯನವರು ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯನವರು ಜನಪರ ಹಾಗೂ ಅಪರೂಪದ ರಾಜಕಾರಣಿ, ಕಳಂಕ ರಹಿತ ರಾಜಕಾರಣಿ, 4 ದಶಕಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಸಿದ್ದರಾಮಯ್ಯನವರಿಗೆ ಕಳಂಕ ತರುವ ಉದ್ದೇಶದಿಂದ ಇದನ್ನು ಸಿದ್ದರಾಮಯ್ಯನವರ ಬೆಳವಣಿಗೆಯನ್ನು ಸಹಿಸದ ಜನ ಈ ಪ್ರಕರಣವನ್ನು ದೊಡ್ಡ ವಿಷಯ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣದಿಂದ ಈ ಪ್ರಕರಣಕ್ಕೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಎಲ್ಲಾ ಪ್ರಕರಣಗಳಂತೆ ಈ ಪ್ರಕರಣವನ್ನು ಕಾನೂನಿನ ಅಡಿ ವಿಶ್ಲೇಷಿಸಲೂ ಯಾವುದೇ ಅಭ್ಯಂತರವಿಲ್ಲ. ಪಾರ್ವತಿ ಸಿದ್ದರಾಮಯ್ಯನವರು ನೇರವಾಗಿ ಈ ಆಸ್ತಿಯನ್ನು ಖರೀದಿಸಿಲ್ಲ. ಇವರ ಸಹೋದರ ಮಲ್ಲಿಕಾರ್ಜುನ್ ತನ್ನ ಮಾಲೀಕತ್ವದ ಆಸ್ತಿಯನ್ನು ಸೋದರಿಗೆ ನೀಡಿದ್ದಾರೆ. ಇದರಲ್ಲಿ ಪಾರ್ವತಿ ಸಿದ್ದರಾಮಯ್ಯನವರ ಪಾತ್ರವೂ ಇಲ್ಲ. ಸಿದ್ದರಾಮಯ್ಯನವರ ಪಾತ್ರವೂ ಇಲ್ಲ. ಎಲ್ಲವೂ ಕಾನೂನಿನ ಪ್ರಕಾರವೇ ಈ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರ ನಡೆದಿದೆ ಎಂದು ಹೆಚ್ ಎ ವೆಂಕಟೇಶ್ ತಿಳಿಸಿದರು.

ಪರಿಹಾರದ ಬದಲಾಗಿ ನಿದೇಶನ ನೀಡುವಂತೆ ಪಾರ್ವತಿ ಸಿದ್ದರಾಮಯ್ಯನವರು ಮುಡಾಗೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿ 38,000 ಚದರ ಅಡಿ ಭೂಮಿ ಮುಡಾದಿಂದ ನೀಡಲಾಗಿದೆ. ಕಾನೂನು ಬದ್ದ ಸಂಸ್ಥೆಯಾದ ಮುಡಾದ ಆಯುಕ್ತರು ಪ್ರಾಧಿಕಾರದ ತೀರ್ಮಾನದಂತೆ ಕಾನೂನಿನ ಅಡಿಯಲ್ಲಿ ನಿವೇಶನ ಮಂಜೂರು ಮಾಡಿರುತ್ತಾರೆ. ಎಲ್ಲವೂ ಕಾನೂನಿನ ಪ್ರಕಾರವೇ ನಡೆದಿದೆ. ಪಾರದರ್ಶಕವಾಗಿ ನಡೆದಿದೆ. ದೂರಿನನ್ವಯ ಈ ಪ್ರಕರಣ ಸರ್ಕಾರ ತನಿಖೆ ನಡೆಸುತ್ತಿದ್ದು, ತನಿಖಾ ವರದಿ ಬರುವವರೆಗೂ ಬಹಳ ತಾಳ್ಮೆಯಿಂದ ಇರುವುದು ಸೂಕ್ತವಾಗಿದೆ. ರಾಜಕಾರಣಿ ಪತ್ನಿಯಾಗಿ ಪಾರ್ವತಿ ಸಿದ್ದರಾಮಯ್ಯನವರು ಬೇರೆಯವರಿಗೆ ಮಾದರಿಯಾಗಿದ್ದಾರೆ. ಅವರ ಆದರ್ಶ ಅನೂಕರಣೀಯವಾದದ್ದು. 40 ವರ್ಷಗಳ ಸಿದ್ದರಾಮಯ್ಯನವರ ರಾಜಕೀಯ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ ಯಾವತ್ತು ಆಡಳಿತದಲ್ಲಿ ಮಧ್ಯಪ್ರವೇಶಿಸಿ ಯಾವುದೇ ಪ್ರಭಾವ ಬೀರಿರುವುದಿಲ್ಲ. ಶ್ರೀ ಸಾಮಾನ್ಯರಂತೆ ಬದುಕು ನಡೆಸುತ್ತಿದ್ದಾರೆ. ಹಲವು ವ್ಯಕ್ತಿಗಳು ಸಿದ್ದರಾಮಯ್ಯನವರ ವಿರುದ್ಧ ಆಧಾರರಹಿತ ಅಪಾದನೆ ಮಾಡಿದ್ದಾರೆ. ಒಬ್ಬ ಜನನಾಯಕ ಮುಖ್ಯಮಂತ್ರಿಯನ್ನು ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನಿಸಿರುವುದು ಸತ್ಯಕ್ಕೆ ನಾಗರೀಕ ಸಮಾಜದ ಲಕ್ಷಣವಲ್ಲ ಎಂದರು.

ಶ್ರೀ ಸಿದ್ದರಾಮಯ್ಯನವರ ಮೇಲಿನ ದ್ವೇಷಕ್ಕೆ ಕುಟುಂಬದದವರ ಪ್ರಕರಣವನ್ನು ಎಳೆದು ರಾಜಕೀಯಗೊಳಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರು ಇಂತಹ ದುಸ್ಸಾಹಸಕ್ಕೆ ಮುಂದಾಗಿರುವುದು ಸಾರ್ವಜನಿಕ ಜೀವನಕ್ಕೆ ಮಾಡಿದ ಘೋರ ಅಪರಾದವಾಗಿದೆ ಎಂದು ವಾಗ್ದಾಳಿ ನಡೆಸಿದರು.

Key words: Muda scam, Siddaramaiah, HA Venkatesh

Tags :

.