ಮುಡಾ ಹಗರಣ: ಬಹಿರಂಗ ಚರ್ಚೆಗೆ ಬಾರದೆ ಬಿ. ವೈ ವಿಜಯೇಂದ್ರ ಪಲಾಯನ- ಕೆ.ಎಸ್ ಶಿವರಾಂ ಕಿಡಿ
ಮೈಸೂರು,ಜುಲೈ, 29,2024 (www.justkannada.in): 2021 ರಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಸಾರ್ವಜನಿಕ ಬಹಿರಂಗ ಚರ್ಚೆಗೆ ಬರುವಂತೆ ನಾವು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನ ಆಹ್ವಾನಸಿದ್ದವು. ಆದರೆ ಚರ್ಚೆಗೆ ಬಾರದೆ ಅವರು ಪಲಾಯನವಾದ ಮಾಡಿದ್ದಾರೆ ಎಂದು ರಾಜ್ಯ ಹಿಂದುಳಿದವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಂ ಕಿಡಿಕಾರಿದ್ದಾರೆ.
2021 ರಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ) ಹಾಗೂ ಅಹಿಂದ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕ ಬಹಿರಂಗ ಚರ್ಚೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಎಸ್ ಶಿವರಾಂ, ಸಿಎಂ ಸಿದ್ದರಾಮಯ್ಯರವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದು ಹಾಗೂ ಅವರನ್ನು ಮುಖ್ಯಮಂತ್ರಿಯ ಹುದ್ದೆಯಿಂದ ಕೆಳಗಿಳಿಸುವ ಒಂದೇ ಧ್ಯೇಯೋದ್ದೇಶದಿಂದ ರಾಜಕೀಯ ಹುನ್ನಾರ ಮಾಡುತ್ತಿದೆ. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯರವರ ರಾಜಿನಾಮೆ ಕೇಳುತ್ತಿರುವುದು ಸರಿಯಷ್ಟೆ. ಇದೇ 2021 ರಲ್ಲಿ ಮುಖ್ಯಮಂತ್ರಿಯವರಾದ ಯಡಿಯೂರಪ್ಪನವರ ಕಾಲದಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಆ ಭ್ರಷ್ಟಾಚಾರದ ರೂವಾರಿ ಆಗಿನ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ರವರು ಮತ್ತು ಅವರ ತಂಡ. ಮುಡಾದಲ್ಲಿ ಮಾಡಬಾರದ ಭ್ರಷ್ಟಾಚಾರ ಮಾಡಿ, ಮುಡಾವನ್ನು ಅಧೋಗತಿಗೆ ತಂದಿದ್ದರು. ಇದರ ವಿರುದ್ಧ ನಮ್ಮ ವೇದಿಕೆ 2021 ರಲ್ಲಿ ಬೃಹತ್ ಹೋರಾಟ ನಡೆಸಿ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿತ್ತು ಹಾಗೂ ಸಿಬಿಐ ತನಿಖೆಗೆ ಆಗ್ರಹಿಸಿತ್ತು. ಆ ಸಂದರ್ಭದಲ್ಲಿ ಮುಡಾ ಭ್ರಷ್ಟಾಚಾರದ ವಿರುದ್ಧ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಾಗಲೀ, ವಿಜಯೇಂದ್ರ ರವರಾಗಲೀ ಸೊಲ್ಲೆತ್ತಲಿಲ್ಲ. ಏಕೆಂದರೆ ಆ ಭ್ರಷ್ಟಾಚಾರದ ಪಿತಾಮಹ ಬಿ.ವೈ.ವಿಜಯೇಂದ್ರ ರವರೇ ಆಗಿದ್ದರು ಎಂದು ಆರೋಪಿಸಿದರು.
ಈಗ ಏಕಾಏಕಿ ಶ್ರೀ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೆ ಒಬ್ಬ ಆಹಿಂದ ಮುಖ್ಯಮಂತ್ರಿಯನ್ನು ಆ ಹುದ್ದೆಯಿಂದ ಕೆಳಗಿಳಿಸಲು ಸಿದ್ದರಾಮಯ್ಯರವರ ವಿರುದ್ಧ ಮುಡಾ ಭ್ರಷ್ಟಾಚಾರ ಪ್ರಕರಣವನ್ನು ಎಳೆದು ತಂದು ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ದಿನಾಂಕ 26.07.2024 ರಂದು ವಿಜಯೇಂದ್ರರವರಿಗೆ ಪತ್ರ ಬರೆದು ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಮುಕ್ತ ಆಹ್ವಾನವನ್ನು ನೀಡಿದ್ದೆವು.
ಆದರೆ ಅವರು ಇಂದು ಸಾರ್ವಜನಿಕ ಚರ್ಚೆಗೆ ಆಗಮಿಸದೆ ಪಲಾಯನವಾದ ಮಾಡಿದ್ದಾರೆ. ಇದರ ಉದ್ದೇಶ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬಿತಾಗಿದೆ. ಈ ಮೂಲಕ ಆಹಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವುದು. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿರುವುದು ಸಾಬೀತಾಗಿದೆ. ಇನ್ನಾದರೂ ಎಚ್ಚೆತ್ತು ಸಿದ್ದರಾಮಯ್ಯರವರ ವಿರುದ್ಧ ಮಾಡುತ್ತಿರುವ ಪಿತೂರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬಿಜೆಪಿ, ಜೆಡಿಎಸ್ ವಿರುದ್ದ ಅಹಿಂದ ಸಮುದಾಯಗಳು ದಂಗೆ ಏಳುವ ದಿನ ದೂರವಿಲ್ಲ ಎಂದು ಕೆ.ಎಸ್ ಶಿವರಾಂ ಎಚ್ಚರಿಸಿದರು.
ಈ ಸಾರ್ವಜನಿಕ ಬಹಿರಂಗ ಚರ್ಚೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ಅಲ್ಪಸಂಖ್ಯಾತ ಮುಖಂಡರಾದ ನಾಸೀರ್, ರೆಸ್ಪಾನ್ಸಿಬಲ್ ಸಿಟಿಜನ್ ವಾಯ್ಸ್ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಫ್.ಖಲೀಂ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷರಾದ ಯೋಗೇಶ್ ಉಪ್ಪಾರ್, ನಗರ ಕಾಂಗ್ರೆಸ್ ಓ.ಬಿ.ಸಿ. ಘಟಕದ ಅಧ್ಯಕ್ಷರಾದ ಎನ್.ಆರ್.ನಾಗೇಶ್, ಹಿಂದುಳಿದವರ್ಗಗಳ ಮುಖಂಡರಾದ ಲೋಕೇಶ್ ಮಾದಾಪುರ, ಮುಖಂಡರಾದ ಕೇಶವ, ದಲಿತ ಮುಖಂಡರಾದ ರಾಜಶೇಖರ್, ಶಿವಲಿಂಗಯ್ಯ, ಅಲ್ಪಸಂಖ್ಯಾತರ ಮುಖಂಡರಾದ ರಹೀಮ್, ಸುನಿಲ್ ನಾರಾಯಣ್, ರವಿ ನಜರ್ ಬಾದ್, ಮಂಜುಳ, ಮಂಗಳ ಮಾಲತಿ ಮುಂತಾದವರು ಭಾಗವಹಿಸಿದ್ದರು.
Key words: Muda scandal, open discussion, B. Y Vijayendra, KS Shivaram