ಮುಡಾ ಹಗರಣ: ಜೆಡಿಎಸ್ ನಾಯಕರ ಪ್ರತ್ಯೇಕ ಪತ್ರಿಕಾಗೋಷ್ಠಿಗೆ ಕಾರಣವೇನು?
ಮೈಸೂರು, ಜುಲೈ,27,2024 (www.justkannada.in): ಮುಡಾ ಹಗರಣ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ಮುಡಾದಿಂದ ಜೆಡಿಎಸ್ ಮುಖಂಡರಾದ ಜಿ.ಟಿ ದೇವೇಗೌಡ, ಸಿಎನ್ ಮಂಜೇಗೌಡ, ಸಾ.ರಾ ಮಹೇಶ್ ಸೈಟ್ ಪಡೆದ ಬಗ್ಗೆ ವಿವರ ನೀಡಿದ್ದರು. ಈ ಕುರಿತು ಸ್ಪಷ್ಟನೆ ನೀಡಲು ಜೆಡಿಎಸ್ ಮೂವರು ಮುಖಂಡರು ಇಂದು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ್ದು ಆಶ್ಚರ್ಯಕರವಾಗಿದೆ.
ಜೆಡಿಎಸ್ ಮುಖಂಡರು ಮುಡಾದಿಂದ ಸೈಟ್ ಪಡೆದ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು. ಈ ಬಗ್ಗೆ ಜೆಡಿಎಸ್ ಮುಖಂಡರಾದ ಮಾಜಿ ಮೇಯರ್ ರವಿಕುಮಾರ್, ಶಾಸಕ ಜಿ.ಟಿ ದೇವೇಗೌಡ, ಮಾಜಿ ಸಚಿವ ಸಾ.ರಾ ಮಹೇಶ್ ಮೂವರು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು. ಆದರೆ ಮೂವರು ಮುಖಂಡರು ಒಂದೇ ಪಕ್ಷದಲ್ಲಿದ್ದರೂ ಸಹ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ್ದರಿಂದ ಭಿನ್ನಾಭಿಪ್ರಾಯವೇ ಎಂಬ ಪ್ರಶ್ನೆ ಉದ್ಬವವಾಗಿದೆ.
ಹೆಚ್.ಡಿಕೆ ನಿವೇಶನ ಪಡೆದಿದ್ದಾರೆ ಎಂಬುದು ಸುಳ್ಳು ಆರೋಪ- ಮಾಜಿ ಮೇಯರ್ ರವಿಕುಮಾರ್
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ರವಿಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಅವರೂ ನಿವೇಶನ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. 1985 ರಲ್ಲೇ ಕೈಗಾರಿಕಾ ವಲಯದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಣ ಸಂದಾಯ ಮಾಡಿದ್ದರೂ ಇನ್ನೂ ಮುಂಜೂರು ಮಾಡಿಲ್ಲ. ಸಚಿವ ಭೈರತಿ ಸುರೇಶ್ ಅವರು ಕುಮಾರಸ್ವಾಮಿ ಅವರಿಗೂ ನಿವೇಶನ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಅರ್ಜಿ ಸಲ್ಲಿಸಿ 40 ವರ್ಷಗಳಾದರೂ ಇನ್ನೂ ನಿವೇಶನ ಹಂಚಿಕೆ ಮಾಡಿಲ್ಲ. ಲಕ್ಷ್ಮಣ್ ಅವರು ಸುಖಾ ಸುಮ್ಮನೆ ನಮ್ಮ ಪಕ್ಷ ವರಿಷ್ಠರ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳು ಸತ್ಯಕ್ಕೆ ದೂರವಾದದ್ದು. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಡಾ ಹಗರಣದಲ್ಲಿ ನೂರಾರು ಕೋಟಿ ಲೂಟಿ ಆಗಿದೆ. ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸತ್ಯಾಂಶ ಬೆಳಕಿಗೆ ಬರುತ್ತದೆ ಎಂದು ಆಗ್ರಹಿಸಿದರು.
ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ –ಶಾಸಕ ಜಿ.ಟಿ ದೇವೇಗೌಡ
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಜಿ.ಟಿ ದೇವೇಗೌಡರು, ಜಿ ಟಿ ದೇವೇಗೌಡರಿಗೆ ಮುಡಾದಿಂದ ಜಮೀನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರೋಪಿಸಿದ್ದಾರೆ. ಆದರೆ ಸಚಿವರು ಹೇಳಿರುವಂತೆ ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ. ಗೋವಿಂದರಾಜು ಮುಡಾ ಅಧ್ಯಕ್ಷರಾಗಿದ್ದಾಗ ಲಾಟರಿಯಲ್ಲಿ ಒಂದು ನಿವೇಶನ ಬಂದಿದೆ. 50×80 ಅಳತೆಯ ನಿವೇಶನ ಲಾಟರಿಯಲ್ಲಿ ಬಂದಿರುವುದನ್ನು ಹೊರತುಪಡಿಸಿದರೆ ಯಾವುದೇ ಒಂದು ನಿವೇಶನ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಹೆಸರಲ್ಲಿ ಸೈಟ್ ಇದ್ದರೆ ಋಜುವಾತು ಮಾಡಿ- ಮಾಜಿ ಸಚಿವ ಸಾರಾ ಮಹೇಶ್
ಮೈಸೂರಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾರಾ ಮಹೇಶ್, ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ಹೆಸರು ಹೇಳಿದ್ದಾರೆ. ನನ್ನ ಹೆಸರಲ್ಲಿ ಸೈಟ್ ಇದ್ದರೆ ಋಜುವಾತು ಮಾಡಿ ಎಂದು ಸವಾಲೆಸೆದರು.
ದಟ್ಟಗಳ್ಳಿ ನಂ.133/3ರಲ್ಲಿ 9 ಗುಂಟೆ, ಬೋಗಾದಿಯಲ್ಲಿ 2.11 ಎಕರೆ ಜಾಗ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ಆ ಎರಡೂ ಜಾಗ ಯಾರ ಹೆಸರಿನಲ್ಲಿದೆ ಎಂಬುದನ್ನು ಹೇಳಿ ಎಂದು ಆಗ್ರಹಿಸಿದರು.
Key words: Muda scandal, separate press conference, JDS leaders