ಸಿ.ಎ ನಿವೇಶನ ಪಡೆದು ಅನಧಿಕೃತ ಕಟ್ಟಡ ನಿರ್ಮಿಸಿ ಬಾಡಿಗೆ: ಮುಡಾ ನೋಟಿಸ್ ಗೂ ಕ್ಯಾರೆ ಎನ್ನದ ಕೃಷಿಕ್ ಸರ್ವೋದಯ ಫೌಂಡೇಶನ್.
ಮೈಸೂರು,ಜೂನ್, 8,2024 (www.justkannada.in): ತರಬೇತಿಯುಕ್ತ ವಸತಿ ಕೇಂದ್ರ ಉದ್ದೇಶಕ್ಕೆಂದು ಸಿ.ಎ ನಿವೇಶನ ಪಡೆದ ಕೃಷಿಕ್ ಸರ್ವೋದಯ ಫೌಂಡೇಶನ್ ಇದೀಗ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಕ್ಯಾಂಟಿನ್ ಗೆ ಬಾಡಿಗೆ ನೀಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಕೃಷಿಕ್ ಸರ್ವೋದಯ ಫೌಂಡೇಶನ್ ಗೆ ಮುಡಾ ವಲಯ ಅಧಿಕಾರಿ ನೋಟಿಸ್ ಕೊಟ್ಟು ವಾರ ಕಳೆದರೂ ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿಜಯನಗರ 2ನೇ ಹಂತ ಬಡಾವಣೆಯಲ್ಲಿನ ಸಿ.ಎ. ನಿವೇಶನ ಸಂಖ್ಯೆ-25 ಅನ್ನು ಮುಡಾದಿಂದ ತರಬೇತಿಯುಕ್ತ ವಸತಿ ಕೇಂದ್ರ ಉದ್ದೇಶಕ್ಕೆ ಕೃಷಿಕ್ ಸರ್ವೋದಯ ಫೌಂಡೇಶನ್ ಗೆ ಮಂಜೂರು ಮಾಡಲಾಗಿತ್ತು.
ಆದರೆ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಲಿ ಸ್ಥಳದಲ್ಲಿ ಮಂಜೂರಾತಿ ಮಾಡಿರುವ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಪೊದಾರ್ ಇಂಟರ್ ನ್ಯಾಷನಲ್ ಶಾಲಾ ಸಂಸ್ಥೆ ಹಾಗೂ ನೇಹ ಕ್ಯಾಂಟೀನ್ ರವರಿಗೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ, ಬಾಡಿಗೆ ನೀಡಿದೆ. ಜೊತೆಗೆ ಈಗ ಮತ್ತೊಂದು ಕಟ್ಟಡವನ್ನು ಪಕ್ಕದಲ್ಲಿರುವ ಕೆರೆಯ ಬಫರ್ ಜಾಗದಲ್ಲಿ ನಿರ್ಮಿಸುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ನೋಟಿಸ್ ನಲ್ಲಿ ಮುಡಾ ವಲಯ ಅಧಿಕಾರಿ ಉಲ್ಲೇಖಿಸಿದ್ದಾರೆ.
ಕೃಷಿಕ್ ಸರ್ವೋದಯ ಫೌಂಡೇಶನ್ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಬೇರೆ ಉದ್ದೇಶಕ್ಕೆ ಬಾಡಿಗೆ ನೀಡಿರುವುದು ದಿನಾ೦ಕ:02.02.2005ರ ಗುತ್ತಿಗೆ ಒಪ್ಪಂದ ಪತ್ರದ ಕ್ರಮ ಸಂಖ್ಯೆ 5 ಮತ್ತು 6ರ ಉಲ್ಲಂಘನೆಯಾಗಿದ್ದು, ಉದ್ದೇಶ ಬದಲಾವಣೆ ಹಾಗೂ ಮತ್ತೊಂದು ಸಂಸ್ಥೆಗೆ ಪರಭಾರೆ ಮಾಡಿರುವ ಬಗ್ಗೆ ಸೂಕ್ತ ಸಮಜಾಯಿಷಿಯನ್ನು ಈ ಪತ್ರ ತಲುಪಿದ 07 ದಿನಳಗೊಳಗಾಗಿ ನೀಡತಕ್ಕದ್ದು ಹಾಗೂ ಬಫರ್ ಜಾಗದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವುದು. ತಪ್ಪಿದಲ್ಲಿ ನಿಮಗೆ ನೀಡಿರುವ ಸಿ.ಎ. ನಿವೇಶನವನ್ನು ರದ್ದುಗೊಳಿಸಿ ಹಿಂಪಡೆಯುವ ಬಗ್ಗೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಮುಡಾ ನೋಟಿಸ್ ನಲ್ಲಿ ತಿಳಿಸಿತ್ತು
ಆದರೆ ಮುಡಾ ನೋಟಿಸ್ ಗೆ ಕೃಷಿಕ್ ಸರ್ವೋದಯ ಫೌಂಡೇಶನ್ ಕ್ಯಾರೆ ಎನ್ನದೇ ಪೊದಾರ್ ಇಂಟರ್ ನ್ಯಾಷನಲ್ ಶಾಲಾ ಸಂಸ್ಥೆ ಹಾಗೂ ನೇಹ ಕ್ಯಾಂಟೀನ್ ರವರಿಗೆ ಬಾಡಿಗೆ ನೀಡಿರುವುದನ್ನ ಹಿಂಪಡೆಯದೇ ಸಿ.ಎ ನಿಯಮ ಉಲ್ಲಂಘಿಸಿದೆ.
Key words: MUDA, site, Krishik,Sarvodaya, Foundation