For the best experience, open
https://m.justkannada.in
on your mobile browser.

ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ: ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ ಹಾಡಿಯ ಆದಿವಾಸಿ ಜನರು.

01:08 PM Apr 18, 2024 IST | prashanth
ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ  ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ ಹಾಡಿಯ ಆದಿವಾಸಿ ಜನರು

ಮೈಸೂರು,ಏಪ್ರಿಲ್,18,2024 (www.justkannada.in): ತಮ್ಮ ಊರಿನಲ್ಲೇ ಮತಗಟ್ಟೆ ಸ್ಥಾಪಿಸುವಂತೆ ಆಗ್ರಹಿಸಿರುವ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಚನ್ನಗುಂಡಿ ಹಾಡಿಯಲ್ಲಿನ ಆದಿವಾಸಿ ಜನರು ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಚನ್ನಗುಂಡಿ ಹಾಡಿಯಲ್ಲಿನ ಆದಿವಾಸಿ ಜನರು ಏಪ್ರಿಲ್ 26 ರಂದು ನಡೆಯುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.  ನಮಗೆ ಮತಗಟ್ಟೆ ಕೊಟ್ಟು, ವೋಟು ತಗೋಳಿ. ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಚನ್ನಗುಂಡಿ ಹಾಡಿಯ ಜನರ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮತಗಟ್ಟೆಯಲ್ಲೆ ನಾವು ಮತ ಹಾಕ್ತೀವಿ ಬೇರೆ ಊರಿಗೆ ಹೋಗುವುದಿಲ್ಲ. ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ. ನಮ್ಮ ತಾತ ಮುತ್ತಾತನ ಕಾಲದಿಂದಲೂ ನಾವು ಚನ್ನಗುಂಡಿಹಾಡಿ ಗ್ರಾಮದಲ್ಲಿ ಮತವನ್ನು ಹಾಕಿ ಬರುತ್ತಿದ್ದೇವೆ. ನಮ್ಮೂರಲ್ಲಿ ಇದ್ದ ಮತಗಟ್ಟೆಯನ್ನು ತೆಗೆದು ಹಾಕಿ ಪಕ್ಕದ ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಿದ್ದಾರೆ. ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ.

ನಮ್ಮಲ್ಲಿ ವಯಸ್ಸಾದ ವೃದ್ಧರಿದ್ದಾರೆ. ಅಂಗವಿಕಲರಿದ್ದಾರೆ, ಗರ್ಭಿಣಿ ಬಾಣಂತಿಯರಿದ್ದಾರೆ. ಸುಮಾರು 5 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮತವನ್ನು ಹಾಕಲು ನಮ್ಮಿಂದ ಸಾಧ್ಯವಿಲ್ಲ‌. ಚುನಾವಣಾ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತವನ್ನು ಚಲಾಯಿಸಿದ್ದೇವೆ.  ಸಂಚಾರಕ್ಕೆ ಯಾವುದೇ ವಾಹನದ ವ್ಯವಸ್ಥೆ ಕಲ್ಪಿಸುವುದಿಲ್ಲ ಎಂದು ಹಾಡಿಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ನಿಮ್ಮ ಗ್ರಾಮದಲ್ಲಿಯೇ ಮತಗಟ್ಟೆ ತೆರೆಯುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಮತಗಟ್ಟೆಯನ್ನು ತೆರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ.  ನಮ್ಮ ಗ್ರಾಮದಲ್ಲಿ ಬೂತ್ ಮಾಡಿದರೆ ಮಾತ್ರ ನಾವು ವೋಟ್ ಹಾಕುತ್ತೇವೆ. ಇಲ್ಲ ಅಂದರೆ ಯಾವುದೇ ಕಾರಣಕ್ಕೂ ನಾವು ಮತ ಹಾಕಲ್ಲ.  ವೋಟರ್ ಲಿಸ್ಟ್ ನಲ್ಲಿ ಮರಣ ಹೊಂದಿದವರನ್ನು ಜೀವಂತವಾಗಿರುವವರನ್ನು ಡಿಲೀಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: mysore, Adivasi people, election, boycott

Tags :

.