ಟಿಕೆಟ್ ಗಾಗಿ ಒಂದೇ ಮನೆಯಲ್ಲಿ ಇಬ್ಬರು ಲಾಬಿ: ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಬಿವೈ ವಿಜಯೇಂದ್ರ ಭೇಟಿ.
ಮೈಸೂರು,ಫೆಬ್ರವರಿ,22,2024(www.justkannada.in): ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಂದೇ ಮನೆಯಲ್ಲಿ ಇಬ್ಬರು ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಗೆ ಲಾಬಿ ನಡೆಸುತ್ತಿದ್ದಾರೆ. ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಇಬ್ಬರು ಅಳಿಯಂದಿರಾದ ಡಾ.ಮೋಹನ್ ಮತ್ತು ಹರ್ಷವರ್ಧನ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶ್ರೀನಿವಾಸ್ ಅಳಿಯ ಡಾ.ಮೋಹನ್ ವೈದ್ಯಕೀಯ ವೃತ್ತಿಗೆ ರಾಜೀನಾಮೆ ಕೊಟ್ಟು ಚಾಮರಾಜನಗರ ಕ್ಷೇತ್ರದಲ್ಲಿ ಓಡಾಡುತ್ತಿದ್ದರೇ ಮತ್ತೊಂದೆಡೆ ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಹರ್ಷವರ್ಧನ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದಾರೆ. ಶ್ರೀನಿವಾಸ್ ಪ್ರಸಾದ್ ಈಗಾಗಲೇ ಚುನಾವಣೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದು, ಈ ಕಾರಣದಿಂದ ವಿಜಯೇಂದ್ರ ಅವರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ಬಳಿಕ ಮಾತನಾಡಿರುವ ಬಿವೈ ವಿಜಯೇಂದ್ರ, ಮೈಸೂರಿಗೆ ಬಂದಾಗ ನಮ್ಮೆಲ್ಲರ ಹಿರಿಯ ನಾಯಕರಾದ ಶ್ರೀನಿವಾಸ್ ಪ್ರಸಾದ್ ಅವರನ್ನ ಭೇಟಿ ಮಾಡುತ್ತಿರುತ್ತೇನೆ. ಅದರಂತೆ ಇಂದು ಕೂಡ ಭೇಟಿ ಮಾಡಿದ್ದೇನೆ. ಮುಂದಿನ ತಿಂಗಳು 17ಕ್ಕೆ ಅವರ ರಾಜಕೀಯ ಜೀವನದಲ್ಲಿ 50 ವರ್ಷಗಳ ಪೂರೈಸಲಿದ್ದಾರೆ. ಅವರು ನನ್ನನ್ನ ನೋಡಿ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ. ಅವರಿಂದ ಸಲಹೆ ಸೂಚನೆಗಳನ್ನು ಪಡೆದಿದ್ದೇನೆ. ಚಾಮರಾಜನಗರ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ವಿಚಾರವಾಗಿ ಮಾತಾನಾಡಿ ಸಲಹೆಗಳನ್ನು ಪಡೆದಿದ್ದೇನೆ ಎಂದರು.
ಅವರು ಈಗಾಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಅವರ ಸ್ಥಾನಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: mysore- bjp-president- BY Vijayendra –visits- Srinivas Prasad- residence.