For the best experience, open
https://m.justkannada.in
on your mobile browser.

ಮೈಸೂರು ಕೇಂದ್ರ ಬಸ್ ನಿಲ್ದಾಣ ಬೇರೆಡೆಗೆ  ಸ್ಥಳಾಂತರಿಸಿ- ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ

05:44 PM Aug 30, 2024 IST | prashanth
ಮೈಸೂರು ಕೇಂದ್ರ ಬಸ್ ನಿಲ್ದಾಣ ಬೇರೆಡೆಗೆ  ಸ್ಥಳಾಂತರಿಸಿ  ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ

ಮೈಸೂರು,ಆಗಸ್ಟ್,30,2024 (www.justkannada.in): ಬೆಂಗಳೂರು - ನೀಲಗಿರಿ ರಸ್ತೆಯಲ್ಲಿರುವ ಮೈಸೂರಿನ ಕೇಂದ್ರ ಬಸ್ ನಿಲ್ದಾಣವು   ಇಂದಿನ ಪ್ರಯಾಣಿಕರ ಸಂಖ್ಯೆ ಹಾಗೂ ನಿಲ್ದಾಣದಲ್ಲಿನ ಬಸ್ಸುಗಳ ಸಂಖ್ಯೆಗೆ  ತುಂಬಾ ಕಿರಿದಾಗಿದೆ. ಹೀಗಾಗಿ  ಈ ನಿಲ್ದಾಣವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂದೇಶ್ ಸ್ವಾಮಿ,  ಮೈಸೂರು ಕೇಂದ್ರ ಬಸ್ ನಿಲ್ದಾಣದಲ್ಲಿ  ಪ್ರತಿನಿತ್ಯ ಸುಮಾರು ಮೂರು ಸಾವಿರಕ್ಕೂ ಅಧಿಕ‌ ಬಸ್ಸುಗಳು ದಿನದ 24 ಗಂಟೆಯಲ್ಲಿ ಬಂದು ಹೋಗುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳ  ಹಾಗೂ ಅಂತಾರಾಜ್ಯದ ಬಸ್ಸುಗಳು ಇಲ್ಲಿನ ನಿಲ್ದಾಣದಿಂದ ಸಂಚರಿಸಲಿವೆ. ತುಂಬ ಕಿರಿದಾದ ಸ್ಥಳವಾಗಿರುವ ಕಾರಣ ನಿಲ್ದಾಣದ  ಒಳಗೆ ಪ್ರಯಾಣಿಕರು ಪ್ರಾಣ ಭೀತಿಯಿಂದ ನಡೆದಾಡುವಂತಾಗಿದೆ.  ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ವಿಸ್ತಾರವಾದ ಸ್ಥಳದಲ್ಲಿ ಈ ಕೇಂದ್ರ ಬಸ್ ನಿಲ್ದಾಣವನ್ನು ನಿರ್ಮಿಸುವ ಮೂಲಕ‌ ಜನರಿಗೆ ಅನುಕೂಲ ಕಲ್ಪಿಸಬೇಕಿದೆ.

ಸಬರ್ಬನ್ ಬಸ್ ನಿಲ್ದಾಣದ ಮುಂಭಾಗದ ರಸ್ತೆಯೂ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯು ಗುಂಡಿ ಬಿದ್ದಿವೆ. ನಿಲ್ದಾಣದಿಂದ ಬಸ್ಸುಗಳು ಒಳಗೆ ಹೋಗುವಾಗ ಹಾಗೂ ಹೊರಗೆ ಬರುವಾಗ ಅದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಆ ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದಲ್ಲಿ ಜನರ ಸಂಚಾರಕ್ಕು ಸಹ ಸಮಸ್ಯೆ ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕೇಂದ್ರ ಬಸ್ ನಿಲ್ದಾಣವನ್ನು ಬೇರೆ ಸೂಕ್ತ ಸ್ಥಳಕ್ಕೆ ಅಥವಾ ಬನ್ನಿಮಂಟಪದ ಬಳಿ‌ ಇರುವ ಬಸ್ ಡಿಪೋದಲ್ಲಿನ ಜಾಗಕ್ಕೆ ವರ್ಗಾಯಿಸಿ, ಮೈಸೂರು ನಗರ ಬಸ್ ನಿಲ್ದಾಣವನ್ನು ಕೇಂದ್ರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ. ಕೇಂದ್ರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಇವುಗಳ ನಡುವೆ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಈವರೆಗೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಹಳೇ ವ್ಯವಸ್ಥೆಯನ್ನು ಬದಲಿಸಿ ಹೊಸ ಸೌಲಭ್ಯವನ್ನು ಜನರಿಗೆ ಕಲ್ಪಿಸಲು ಮುಂದಾಗದಿರುವುದು ವಿಷಾದನೀಯ. ದಯವಿಟ್ಟು ಕೇಂದ್ರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ತಾವು ಅಗತ್ಯ ಕ್ರಮ ವಹಿಸುವಂತೆ ಈ ಮೂಲಕ ಮನವಿ ಮಾಡುತ್ತೇನೆ ಎಂದು ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

Key words: Mysore Central Bus Stand, shift , Sandesh Swamy

Tags :

.