For the best experience, open
https://m.justkannada.in
on your mobile browser.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಲ್ಲ- ಆರ್.ಅಶೋಕ್

02:48 PM Aug 10, 2024 IST | prashanth
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಲ್ಲ  ಆರ್ ಅಶೋಕ್

ಮೈಸೂರು,ಆಗಸ್ಟ್,10,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಿವರೆಗೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲವೋ ಅಲ್ಲಿವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್,  ಇದು ಪಾದಾಯಾತ್ರೆ ಅಲ್ಲ, ಮುಡಾ ವಿರುದ್ಧದ ದಂಡಯಾತ್ರೆ‌.  3 ರಿಂದ 4 ಸಾವಿರ ಕೋಟಿ ಲೂಟಿ ಹೊಡೆದದ್ದು ಜನರಿಗೆ ತಲುಪಬೇಕು. ಇದಕ್ಕಾಗಿ ನಾವು ಪಾದಯಾತ್ರೆ ಮಾಡ್ತಿದ್ದೇವೆ‌. ಬಡವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸೈಟಿಲ್ಲ, ಸಿದ್ದರಾಮಯ್ಯಗೆ 14 ಸೈಟು. 25 ಸಾವಿರ ಕೋಟಿ ರೂ ದಲಿತರ ಹಣವನ್ನ ಲೂಟಿ ಹೊಡಿತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಾವೇ ಫ್ರೀ. ರೈತರಿಗೆ ಸಾವೇ ಫ್ರೀ, ಬಡವರ ಹೆಸರಲ್ಲಿ ಸರ್ಕಾರ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡೋವರೆಗೂ ನಾವು ಹೋರಾಟ ನಿಲ್ಲಿಸೋಲ್ಲ ಎಂದು ಆರ್ ಅಶೋಕ್ ಹೇಳಿದರು.

ಸದನದಲ್ಲಿ ಉತ್ತರ ಕೊಡದೆ ಓಡಿ ಹೋಗಿದ್ರಿ‌..

ನಿಂಗ 1 ರೂಪಾಯಿಗೆ ಜಮೀನು ತೆಗೊಂಡಿದ್ರು, ಅವ್ರ ಬಾಮೈದ 5 ಲಕ್ಷಕ್ಕೆ ಬರೆಸಿಕೊಂಡಿದ್ದರು. 1 ರೂಪಾಯಿಂದ 62 ಕೋಟಿಗೆ ಹೋಗಿದೆ. ಕ್ಲೀನ್ ಕ್ಲೀನ್ ಅಂತಾ ಹೇಳ್ತೀರಾ, ವಿಧಾನಸಭೆಯಲ್ಲಿ ಫ್ರೆಂಟ್ ಲೈನ್ ನಲ್ಲಿ ಕುಳಿತು ಪ್ರಾಮಾಣಿಕ ಅಂತಾ ಹೇಳುವ ನೀವು  ಸದನದಲ್ಲಿ ಉತ್ತರ ಕೊಡದೆ ಓಡಿ ಹೋಗಿದ್ರಿ‌.

ನೀವು ಅಲ್ಲೇ ಉತ್ತರ ಕೊಟ್ಟಿದ್ದರೇ, ನಾವು ಯೋಚನೆ ಮಾಡುತ್ತಿದ್ದವು ಪಾದಯಾತ್ರೆ ಮಾಡಬೇಕಾ ಬೇಡವಾ ಅಂತಾ. ಎಲ್ಲಿವರೆಗೂ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಡಲ್ಲವೋ ಅಲ್ಲಿವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದು ಆರ್ ಅಶೋಕ್ ಹೇಳಿದರು.

ದಲಿತ ವಿರೋಧಿ ,ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್- ಮಾಜಿ ಸಚಿವ ಎನ್. ಮಹೇಶ್

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಎನ್ ಮಹೇಶ್, ಭಾಷಣದ ಮೊದಲಿಗೆ ದಲಿತ ವಿರೋಧಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ  ಧಿಕ್ಕಾರ ಎಂದು ಘೋಷಣೆ ಕೂಗಿದರು.

ಬಳಿಕ ಮಾತು ಮುಂದುವರೆಸಿದ ಅವರು, ಸಿದ್ದರಾಮಯ್ಯ ದಲಿತರಿಗೆ ಮೋಸ ಮಾಡಿದ್ದಾರೆ. ಎಸ್.ಸಿ, ಎಸ್ಟಿ ಅಭಿವೃದ್ಧಿಗೆ ಇರುವ 25 ಸಾವಿರ ಕೋಟಿ ಹಣವನ್ನು ಗ್ಯಾರೆಂಟಿಗೆ ಬಳಕೆ ಮಾಡಲಾಗಿದೆ. ಇದರಿಂದ ಎಸ್ಸಿ. ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಣ ಹಗರಣ ಆಗಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ಇಷ್ಟೋಂದು ದೊಡ್ಟ ಮಟ್ಟದ ಹಣ ವರ್ಗಾವಣೆ ಸಂದರ್ಭ ಹಣಕಾಸು ಸಚಿವ ಸಿಎಂ ಗಮನಕ್ಕೆ ಬಂದಿಲ್ಲವಾ.? ಮೂಡಾ ಹಗರಣದ ಕೆಸರೆ ಗ್ರಾಮದ ಜಮೀನು ದಲಿತರದ್ದು. ಸಿದ್ದರಾಮಯ್ಯರಿಗೆ ನೀಡಿರುವ 14 ನಿವೇಶನ ನಿಂಗರವರ ಕುಟುಂಬಕ್ಕೆ ಸಿಗಬೇಕು. ನೋಟಿಫಿಕೇಷನ್ ಆಗಿರೋ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರ ಹಿಂದಿರೋ ಮಾಸ್ಟರ್ ಮೈಂಡ್ ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

Key words: Mysore chalo, BJP,JDS, R. Ashok

Tags :

.