ನೀವು ಅಧಿಕಾರಕ್ಕೆ ಬಂದಾಗಲೆಲ್ಲಾ ಅರಮನೆ ವಿಚಾರಕ್ಕೆ ಯಾಕೆ ತಲೆ ಹಾಕ್ತೀರಾ.?: ವಿಶ್ವನಾಥ್
ಮೈಸೂರು,ಆಗಸ್ಟ್,14,2024 (www.justkannada.in): ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನೀವು ಅಧಿಕಾರಕ್ಕೆ ಬಂದಾಗಲೆಲ್ಲಾ ಅರಮನೆ ವಿಚಾರಕ್ಕೆ ಯಾಕೆ ತಲೆ ಹಾಕ್ತೀರಾ.? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ.
ಮೈಸೂರಿನ ಕಾಡಾ ಕಚೇರಿಯಲ್ಲಿ ತೆರೆಯಲಾಗಿರುವ ಮೈಸೂರು-ಕೊಡಗು ಸಂಸದರ ನೂತನ ಕಚೇರಿಯನ್ನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಈ ವೇಳೆ ಸಂಸದ ಯದುವೀರ್ ಗೆ ಎಂಎಲ್ ಸಿ ಹೆಚ್. ವಿಶ್ವನಾಥ್ ಶುಭ ಕೋರಿದರು.
ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್, ಚಾಮುಂಡಿ ಬೆಟ್ಟ ಕ್ಷೇತ್ರ ಹೇಗೆ ನಡೆದುಕೊಂಡು ಹೋಗುತ್ತಿದೆ ಆಗೇ ಹೋಗಲಿ. ಪ್ರಾಧಿಕಾರ ಮಾಡಿ ಏನು ಮಾಡುತ್ತೀರಾ. ನೀವು ಸಿಎಂ, ಡಿಸಿಎಂ ಆಗಿದ್ದಾಗ ಈ ತೊಂದರೆ ಬರುತ್ತದೆ. ನೀವು ಅಧಿಕಾರಕ್ಕೆ ಬಂದಾಗಲೆಲ್ಲ ಅರಮನೆ ವಿಚಾರಕ್ಕೆ ಯಾಕೆ ತಲೆ ಹಾಕುತ್ತೀರಾ. ಅದರ ಪಾಡಿಗೆ ಅದು ನಡೆದುಕೊಂಡು ಹೋಗಲಿಕ್ಕೆ ಬಿಡಿ. ಅಭಿವೃದ್ಧಿ ಮಾಡುವುದಕ್ಕೆ ಬೇರೆ ಇದೆ ಅದನ್ನ ಮಾಡಿ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಜನಾಂದೋಲನ, ಮೈತ್ರಿ ಪಕ್ಷದ ಪಾದಯಾತ್ರೆ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಮಾವೇಶ, ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ನೀಡಿದ್ದೀರಿ. ಸಮಾವೇಶದುದ್ದಕ್ಕೂ ಪರಸ್ಪರ ಬೈದಾಡಿಕೊಂಡಿದ್ದೀರಾ. ಸಿಎಂ ಅವರು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು. ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆದರೂ ಒಂದು ನಿವೇಶನ ಹಂಚಿಕೆ ಮಾಡಲು ಆಗಲಿಲ್ಲ. 86 ಸಾವಿರ ಅರ್ಜಿ ಹಾಕಿದ್ದಾರೆ ಮುಡಾದಲ್ಲಿ ಸೈಟ್ ಗಾಗಿ. ಸಿದ್ದರಾಮಯ್ಯ ಜನರಿಗೆ ಸೈಟ್ ಕೊಡ್ತೀನಿ ಎಂದು ತನ್ನ ಹೆಂಡತಿಗೆ ಸೈಟ್ ಕೊಟ್ಟುಕೊಂಡರು ಎಂದು ಮಾತನಾಡುತ್ತಾರೆ ಎಂದು ಗುಡುಗಿದರು.
ಮಿನಿಸ್ಟರ್ ಭೈರತಿ ಸುರೇಶ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾನೆ. 50 ಮಾನನಷ್ಟ ನೀಡಬೇಕೆಂದು ಹೇಳಿದ್ದಾನೆ. ಈ ಕುರಿತು ಮೊನ್ನೆಯಷ್ಟೇ ನೋಟಿಸ್ ಬಂದಿದೆ. ನಾನು ಲಾಯರ್ ಆಗಿದ್ದವನು ಇದನ್ನೆಲ್ಲಾ ಎದುರಿಸೋಣ. ಮುಡಾ ಹಗರಣ ತನಿಖೆ ಮಾಡುತ್ತೇವೆ ಎಂದರು. ಏನಾಯ್ತು ಈಗ ನೀವು ಬಂದು ಹೋದ ಮೇಲು ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ. ಇದೇನಾ ನಿಮ್ಮ ಆಡಳಿತ ಎಂದು ಹರಿಹಾಯ್ದರು.
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರ: ಕಾನೂನು ಹೋರಾಟ-ಯದುವೀರ್
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರ ಕುರಿತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಹಾಗೆಯೇ ಇರಲಿ. ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಕೋರ್ಟ್ ನಲ್ಲಿ ಕೇಸ್ ಇರುವಾಗ ಪ್ರಾಧಿಕಾರ ರಚನೆ ಮಾಡಲು ಸಾಧ್ಯವಿಲ್ಲ. ಚಾಮುಂಡಿ ಬೆಟ್ಟದ ಬಗ್ಗೆ ನಮ್ಮ ತಾಯಿಯವರು ಮಾತನಾಡಿದ್ದಾರೆ. ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.
Ke words: mysore, Chamundi Hills, Authority, H.Vishwanath