ಶೀಘ್ರದಲ್ಲೇ ಮೈಸೂರು ಮಹಾನಗರ ಪಾಲಿಕೆ ಚುನಾವಣೆ- ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್
ಮೈಸೂರು,ನವೆಂಬರ್,6,2023(www.justkannada.in): ಶೀಘ್ರದಲ್ಲೇ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮಾಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಸುರೇಶ್, ಮಹಾನಗರ ಪಾಲಿಕೆ ಅವಧಿ ಈಗಷ್ಟೇ ಮುಗಿದಿದೆ. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡುವ ಪ್ರಶ್ನೆ ಇಲ್ಲ. ಲೋಕಸಭಾ ಚುನಾವಣೆಗೂ ಪಾಲಿಕೆ ಚುನಾವಣೆಗೂ ಸಂಬಂಧವಿಲ್ಲ. ಜನವರಿ ತಿಂಗಳ ಒಳಗೆ ಚುನಾವಣೆ ಮಾಡುತ್ತೇವೆ ಎಂದರು.
ಮೈಸೂರು ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ.
ಮೈಸೂರು ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ನೀಡುವುದಾಗಿ ಭರವಸೆ ಕೊಟ್ಟ, ಸಚಿವ ಭೈರತಿ ಸುರೇಶ್, ಬೆಂಗಳೂರು ಮೈಸೂರು ಜಂಟಿ ನಗರವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ವಿಶೇಷ ಆಸಕ್ತಿ ಇದೆ. ಎರಡನೇಯ ದರ್ಜೆಯ ನಗರಗಳು ಬೆಳೆಯಬೇಕು. ಅದರಲ್ಲೂ ಮೈಸೂರು ಶರವೇಗದಲ್ಲಿ ಬೆಳೆಯುತ್ತಿರುವ ನಗರ. ಇಲ್ಲಿನ ರಿಂಗ್ ರಸ್ತೆಗೆ ನಾಲ್ಕೈದು ಕಡೆ ಫ್ಲೈ ಓವರ್ ಆಗಬೇಕಿದೆ. ಫೆರಿಫರಲ್ ರಿಂಗ್ ರಸ್ತೆ ಕೂಡ ನಿರ್ಮಾಣ ಆಗಬೇಕಿದೆ. ಎಲ್ಲವನ್ನ ಸೇರಿಸಿ ಎರಡು ಸಾವಿರ ಕೋಟಿ ರೂ. ಯೋಜನೆ ರೂಪಿಸುತ್ತಿದ್ದೇವೆ. ಇದು ಸಣ್ಣ ಮೊತ್ತ ಅಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಡಿಪಿಆರ್ ಸಿದ್ದಪಡಿಸುತ್ತೇವೆ ಎಂದರು.
ಸಿಎಂ ಮತ್ತು ಡಿಸಿಎಂ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್, ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವ ದೊಡ್ಡ ವ್ಯಕ್ತಿ ನಾನಲ್ಲ. ಆದರೂ ಕೆಲವು ಸತ್ಯ ಹೇಳುತ್ತೇನೆ ಕೇಳಿ. ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹಾರೇ ಬಿಜೆಪಿಯವರು. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಬಿಜೆಪಿ. ಅವರು ಭ್ರಷ್ಟಾಚಾರ ಮಾಡಿ ಈಗ ಅದನ್ನು ನಮ್ಮ ಮೇಲೆ ಹೇಳುತ್ತಾರೆ. ಇಡೀ ರಾಜ್ಯದ ಜನರೇ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಅಂಥ ಹೇಳುತ್ತಿದ್ದಾರೆ ಎಂದರು.
ಸಿಎಂ ಸ್ಥಾನದ ಹೇಳಿಕೆಗಳ ಪ್ರತಿಕ್ರಿಯೆಯಿಂದ ಅಂತರ ಕಾಯ್ದುಕೊಂಡ ಸಚಿವ ಭೈರತಿ ಸುರೇಶ್, ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ. ರಾಜಕಾರಣ ಬಿಟ್ಟು ಬೇರೆ ಬೇಕಾದರೆ ಉತ್ತರಿಸುತ್ತೇನೆ ಎಂದರು.
Key words: Mysore- city- Corporation –election- soon-Minister -Bhairati Suresh