ತಂದೆ ತಾಯಿ ನೆನಪಿನಾರ್ಥ ಹುಟ್ಟೂರಿಗೆ ಶುದ್ದ ಕುಡಿಯುವ ನೀರಿನ ಘಟಕ : ಲಾ ಗೈಡ್ ವೆಂಕಟೇಶ್ ಕೊಡುಗೆ.
ಹುಣಸೂರು.ಫೆಬ್ರವರಿ,12,2024(www.justkannada.in): ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದಲ್ಲಿ ಹಿರಿಯ ವಕೀಲರು ಲಾ ಗೈಡ್ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಆದ ಹೆಚ್ ಎನ್ ವೆಂಕಟೇಶ್ ಅವರು ತಮ್ಮ ತಂದೆ ನಿವೃತ್ತ ಶಿಕ್ಷಕರಾದ ದಿ. ನಿಂಗೇಗೌಡ ಹಾಗೂ ಲಲಿತಮ್ಮರವರ ಸ್ಮರಣಾರ್ಥ ನಿರ್ಮಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೆಂಗಳೂರು ಸಿಸಿಬಿ ಡಿವೈಎಸ್‌ಪಿ ಕೆ ಎನ್ ಯಶವಂತ್ ಕುಮಾರ್ ಲೋಕಾರ್ಪಣೆ ಮಾಡಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಕೆ ಎನ್ ಯಶವಂತ್ ಕುಮಾರ್, ಗ್ರಾಮೀಣ ಪ್ರದೇಶದ ಬಹುತೇಕ ಗ್ರಾಮಗಳು ಈ ಹಿಂದೆ ನದಿ ಹಾಗೂ ಕೆರೆಗಳಲ್ಲಿನ ಕಲುಷಿತಗೊಂಡ ನೀರನ್ನೇ ಬಳಕೆ ಮಾಡುತ್ತಿದ್ದರೂ ಸಹಾ ಆರೋಗ್ಯದಲ್ಲಿ ಏರು ಪೇರು ಆಗುತ್ತಿರಲಿಲ್ಲ. ಆದರೆ ಇತ್ತಿಚಿನ ದಿನಗಳಲ್ಲಿ ನಾವುಗಳು ಸೇವಿಸುವ ಆಹಾರವು ಎಷ್ಟೇ ಪೌಷ್ಟಿಕ ಆಹಾರವಾಗಿದ್ದರೂ ಅದು ಕೆಮಿಕಲ್ ಮಿಶ್ರಿತ ಆಹಾರವಾಗಿದೆ. ಶುದ್ದು ಕುಡಿಯುವ ನೀರು ಸಿಗುತ್ತಿಲ್ಲ. ಇದನ್ನು ಮನಗಂಡ ಹೆಚ್ ಎನ್ ವೆಂಕಟೇಶ್ ಅವರು ತಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ತಮ್ಮ ತಂದೆ ತಾಯಿ ಸ್ಮರಣಾರ್ಥವಾಗಿ ಉಚಿತವಾಗಿ ನೀಡಲು ಮುಂದೆ ಬಂದು ಸಾಮಾಜಿಕ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸೌಲಭ್ಯವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಈ ಘಟಕದ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಹೆಚ್ ಎನ್ ವೆಂಕಟೇಶ್ ಅವರು ನನ್ನ ತಂದೆಯವರು ನಮ್ಮ ಅಕ್ಕ ಪಕ್ಕದ ಗ್ರಾಮಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇಲ್ಲಿನ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಮೂಲಕ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯ ಸ್ಮರಣಾರ್ಥ ಹಾಗೂ ನಮ್ಮ ತಾಯಿ ಲಲಿತಮ್ಮರವರ ನೆನಪಿಗಾಗಿ ನಾನು ಜನಿಸಿದ ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಸದುದ್ದೇಶದಿಂದ ಈ ಘಟಕವನ್ನು ಸ್ಥಾಪಿಸಿದ್ದೇನೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ನಾನು ಸುಮಾರು 24 ವರ್ಷದ ಹಿಂದೆ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸ್ಥಾಪಿಸಿ, ಆ ಸಂಸ್ಥೆ ವತಿಯಿಂದ ಹಲವು ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಇದೀಗ ಅದೇ ಸಂಸ್ಥೆಯ ವತಿಯಿಂದ ಗ್ರಾಮೀಣ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಪ್ರಥಮವಾಗಿ ನನ್ನ ಸ್ವಗ್ರಾಮ ಇಂಡ್ಲುಗೂಡಿನಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ವೆಚ್ಚದ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದೇನೆ. ಮುಂದೆಯೂ ನನ್ನ ತಾಲ್ಲೂಕಿನ ಗ್ರಾಮೀಣ ಜನರ ಶ್ರೇಯೋಭಿವೃದ್ದಿಗಾಗಿ ಅವಶ್ಯಕತೆಯಿರುವ ಸೌಲಭ್ಯಗಳನ್ನು ನಾನು ಒದಗಿಸುತ್ತೇನೆ. ಮತ್ತು ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮದ ಯಜಮಾನರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಕೀಲರಾದ ಯೋಗನಂದ್, ಹೆಚ್ ಎನ್ ವೆಂಕಟೇಶ್ ಅವರ ಧರ್ಮಪತ್ನಿ ಮಂಜುಳಾ ವೆಂಕಟೇಶ್, ಪುತ್ರ ರೋಹನ್ ಗಂಗಡ್ಕರ್, ಗ್ರಾಮದ ಬಸವರಾಜಪ್ಪ, ಬಿಜೆಪಿ ಮುಖಂಡ ಹನಗೋಡು ಮಂಜುನಾಥ್, ದೊಡ್ಡಹೆಜ್ಜೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಸಹ ಶಿಕ್ಷಕರಾದ ರಮೇಶ್, ಸುರೇಶ್, ಮಾಜಿ ಛೇರ್ಮನ್ ಮರಿಲಿಂಗೇಗೌಡ, ಸಿದ್ದೇಗೌಡ, ಹನಗೋಡು ಸಹಕಾರ ಬ್ಯಾಂಕ್ ನ ಅಧ್ಯಕ್ಷ ಹನುಮ (ರವಿಕುಮಾರ್) ಗ್ರಾಮದ ಮುಖಂಡರಾದ ರಾಮೇಗೌಡ, ಶಿವಕುಮಾರ್, ಕುಮಾರ್, ಎಚ್ ಆರ್ ರಮೇಶ್, ಅಬ್ದುಲ್ ಅಶ್ರಕ್, ನಾಡಕಛೇರಿ ಮಹದೇವ್, ಅಂಜನಾದ್ರಿ ಟ್ರಸ್ಟ್ ಅಧ್ಯಕ್ಷ ವಿ ಎನ್ ದಾಸ್, ಮತ್ತಿತರರು ಹಾಜರಿದ್ದರು.
Key words: mysore-clean -drinking -water unit -hometown: Law Guide- Venkatesh