ಸೇವಾನ್ಯೂನತೆ ಎಸಗಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಒಂದು ಲಕ್ಷ ರೂಪಾಯಿ ದಂಡ. ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗ ಆದೇಶ.
MYSORE, J.25, 2024 : (WWW.JUSTKANNADA.IN NEWS) ಸಾಲ ತೀರಿಸಿದ ನಂತರವೂ ಸ್ವತ್ತಿನ ದಾಖಲೆಗಳನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿವರ:
ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಎಸ್.ರಾಜೇಶ್ವರಿ ತಮ್ಮ ಮನೆಯ ದಾಖಲೆಗಳನ್ನು ಆಧಾರವಾಗಿ ನೀಡಿ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲವನ್ನು ಪಡೆದಿದ್ದರು.ರಾಜೇಶ್ವರಿ ಅವರು 09.09.2020ರಂದು ಮೈಸೂರಿನಲ್ಲಿ ಮೃತಪಟ್ಟರು.
ರಾಜೇಶ್ವರಿಯವರಿಂತ ಮೊದಲೇ ಅವರ ಪತಿ ಮೃತಪಟ್ಡಿದ್ದು ದಂಪತಿಗೆ ಮಕ್ಕಳಿರಲಿಲ್ಲ.
ರಾಜೇಶ್ವರಿ ಅವರು ದಟ್ಟಗಳ್ಳಿಯಲ್ಲಿರುವ ತಮ್ಮ ಮನೆಯು ತಮ್ಮ ಕಾಲಾನಂತರ ತಮ್ಮ ಸಂಬಂಧಿಕರಾದ ಬಿ.ಆರ್.ವೆಂಕಟೇಶ್ ಪ್ರಸಾದ್ ಹಾಗೂ ಆರ್.ಅಶ್ವಿನಿ ಅವರಿಗೆ ಸೇರತಕ್ಕದ್ದೆಂದು ಮರಣ ಶಾಸನ ರಚಿಸಿ ನೋಂದಾಯಿಸಿದ್ದರು. ರಾಜೇಶ್ವರಿ ಅವರ ಕಾಲಾನಂತರ ಈ ಸ್ವತ್ತಿನ ಖಾತೆಯು ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರ ಹೆಸರಿಗೆ ಬದಲಾಗಿ ಇವರಿಬ್ಬರೂ ಸ್ವತ್ತಿನ ಬಾಬ್ತು ತೆರಿಗೆಯನ್ನೂ ಪಾವತಿಸುತ್ತಿದ್ದರು.
ರಾಜೇಶ್ವರಿ ಅವರು ಬ್ಯಾಂಕಿನಿಂದ ಸಾಲ ಪಡೆದ ವಿಚಾರ ತಿಳಿದ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿಯವರು ಬ್ಯಾಂಕಿಗೆ ತೆರಳಿ ಮರಣ ಶಾಸನ ಹಾಗೂ ಖಾತೆ ಬದಲಾವಣೆ ಆದ ಬಗ್ಗೆ ಮಾಹಿತಿ ನೀಡದರು.
ರಾಜೇಶ್ವರಿ ಅವರು ಮಾಡಿದ್ದ ಸಾಲದ ಮೊತ್ತವನ್ನು ಪೂರ್ತಿ ಮರುಪಾವತಿ ಮಾಡಿದರೆ ಸ್ವತ್ತಿಗೆ ಸಂಬಂಧಿಸಿದಂತೆ ರಾಜೇಶ್ವರಿ ಅವರು ಆಧಾರವಾಗಿ ನೀಡಿದ್ದ ಎಲ್ಲಾ ದಾಖಲೆಗಳನ್ನು ಹಿಂದಿರುಗಿಸುವುದಾಗಿ ಬ್ಯಾಂಕಿನ ಅಧಿಕಾರಿಗಳು ಒಪ್ಪಿಕೊಂಡ ಮೇರೆಗೆ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರು ಸಾಲದ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಿದ ಮೇರೆಗೆ ಬ್ಯಾಂಕಿನವರು ಸಾಲ ಚುಕ್ತಾ ಆಗಿದೆಯೆಂದು 29.10.2020 ರಂದು ಪತ್ರ ನೀಡಿದ್ದರು.
ಪೂರ್ತಿ ಸಾಲ ತೀರಿಸಿರುವುದರಿಂದ ಮನೆಯ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ವೆಂಕಟೇಶ್ ಪ್ರಸಾದ್ ಮತ್ತು ಅಶ್ವಿನಿ ಪದೇ ಪದೇ ಕೋರಿಕೊಂಡಾಗ ಬ್ಯಾಂಕಿನ ಕಾನೂನು ಸಲಹೆಗಾರರ ಸಲಹೆ ಪಡೆದು ದಾಖಲೆಗಳನ್ನು ಹಿಂದಿರುಗಿಸುವದಾಗಿ ಬ್ಯಾಂಕಿನವರು ಭರವಸೆ ನೀಡಿದರು.
ಮೃತ ರಾಜೇಶ್ವರಿಯ ಪತಿ ನಾರಾಯಣ ಸ್ವಾಮಿಯ ತಾಯಿ ಹಾಗೂ ಅವರ ವಾರಸುದಾರರೆಲ್ಲರೂ ಕೂಡಿ ಬ್ಯಾಂಕಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಮನೆಯ ದಾಖಲೆಗಳನ್ನು ಹಿಂದಿರುಗಿಸುತ್ತೇವೆಂದು ಬ್ಯಾಂಕಿನ ಅಧಿಕಾರಿಗಳು ಸತಾಯಿಸತೊಡಗಿದರು.
ಈ ವಿಚಾರವಾಗಿ ಮನೆಯ ದಾಖಲೆಗಳನ್ನು ಹಿಂದಿರುಗಿಸುವುದರ ಜೊತೆಗೆ ಸಾಲತೀರುವಳಿ ಪತ್ರ ಬರೆದುಕೊಡುವಂತೆ ಆಗ್ರಹಿಸಿ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿಯವರು 15.04.2023 ರಂದು ಬ್ಯಾಂಕಿಗೆ ನೋಟೀಸು ನೀಡಿದರೂ ಸಹ ಬ್ಯಾಂಕಿನವರು ಪ್ರತಿಕ್ರಯಿಸಲಿಲ್ಲ.
ಇದರಿಂದ ಬೇಸತ್ತ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿಯವರು ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುನೀಡಿ ತಮ್ಮ ಸ್ವತ್ತಿನ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ಬ್ಯಾಂಕಿಗೆ ನಿರ್ದೇಶನ ನೀಡುವುದರ ಜೊತೆಗೆ ಸಾಲ ತೀರುವಳಿ ಪತ್ರ ರಚಿಸಿ ಬ್ಯಾಂಕಿನವರು ನೋಂದಾಯಿಸಿ ಕೊಡಬೇಕೆಂದೂ ಅಲ್ಲದೆ ಎರಡು ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡಬೇಕೆಂದು ಕೋರಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಜಿಲ್ಲಾ ಗ್ರಾಹಕರ ಆಯೋಗವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಸೇವಾ ನ್ಯೂನತೆ ಎಸಗಿದೆ ಎಂದು ತೀರ್ಪುನೀಡಿ ಎಸ್.ರಾಜೇಶ್ವರಿಯವರು ಆಧಾರವಾಗಿಟ್ಟ ಸ್ವತ್ತಿನ ದಾಖಲೆ ಪತ್ರಗಳನ್ನು ದೂರುದಾರರಿಗೆ ಹಿಂದಿರುಗಿಸುವುದರ ಜೊತೆಗೆ ಒಂದು ತಿಂಗಳೊಳಗಾಗಿ ತೀರುವಳಿ ಪತ್ರ ರಚಿಸಿ ನೋದಾಯಿಸಿಕೊಡಬೇಕೆಂದು ಬ್ಯಾಂಕಿಗೆ ನಿರ್ದೇಶಿಸಿ ಆದೇಶಿಸಿದೆ.ಇದಕ್ಕೆ ತಪ್ಪಿದಲ್ಲಿ ದಾಖಲೆ ಪತ್ರ ಹಿಂದಿರುಗಿಸುವವರೆಗೆ ಪ್ರತಿ ದಿನಕ್ಕೆ ನೂರು ರೂಪಾಯಿಯಂತೆ ವೆಚ್ಚ ಭರಿಸುವಂತೆ ಆದೇಶಿಸಿದೆ.
ಇದರೊಂದಿಗೆ ಸೇವಾನ್ಯೂನತೆ ಎಸಗಿ ದೂರುದಾರರಿಗೆ ಮಾನಸಿಕ ಹಿಂಸೆ ನೀಡಿದುದಕ್ಕಾಗಿ ಒಂದು ಲಕ್ಷ ರೂಪಾಯಿ ಪರಿಹಾರವನ್ನೂ, ಪ್ರಕರಣದ ಖರ್ಚು ಐದು ಸಾವಿರ ರೂಪಾಯಿಯನ್ನೂ ಒಂದು ತಿಂಗಳೊಳಗೆ ನೀಡಬೇಕೆಂದು ಆಯೋಗ ಆದೇಶಿಸಿದೆ.ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ 9% ಬಡ್ಡಿಯನ್ನು ಭರಿಸಬೇಕೆಂದೂ ಆಯೋಗ ಆದೇಶಿಸಿದೆ
ದೂರುದಾರರ ಪರವಾಗಿ ವಕೀಲ ಕೆ.ಸಿ.ರವೀಂದ್ರ ಹಾಗೂ ಎಸ್.ರವಿ ವಕಾಲತ್ತು ವಹಿಸಿದ್ದರು.
KEY WORDS : MYSORE - CONSUMER - COURT - FINE