HomeBreaking NewsLatest NewsPoliticsSportsCrimeCinema

ಪತ್ನಿ ಕೊಲೆಗೈದ ಪತಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

05:00 PM Aug 12, 2024 IST | prashanth

ಮೈಸೂರು,ಆಗಸ್ಟ್,12,2024 (www.justkannada.in): ಪತ್ನಿ ಮೇಲೆ ಅನುಮಾನ ಪಟ್ಟು ಆಕೆಯನ್ನ ಕೊಲೆಗೈದಿದ್ದ ಪತಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಿಮಂಟಪ ಸಿ-ಬಡಾವಣೆಯಲ್ಲಿ ವಾಸವಿದ್ದ ರಾಜೇಶ್(35) ಬಿನ್ ಲೇ: ಮಹದೇವಶೆಟ್ಟಿ  ಶಿಕ್ಷೆಗೆ ಗುರಿಯಾದ ಆರೋಪಿ. ಪತ್ನಿ  ರಾಧ ತನ್ನ ಗಂಡ ಆರೋಪಿ ರಾಜೇಶ್ ಮತ್ತು ಮಕ್ಕಳೊಂದಿಗೆ ನರಸಿಂಹರಾಜ ಸಿ-ಬಡಾವಣೆಯಲ್ಲಿ ವಾಸವಿದ್ದರು. ಈ ಮಧ್ಯೆ ಆರೋಪಿ ರಾಜೇಶ್   ಪತ್ನಿ ರಾಧ ಅವರ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು  ಮೊಬೈಲ್ ಅನ್ನು ಕಿತ್ತುಕೊಂಡು ತಾನೇ ಇಟ್ಟುಕೊಂಡಿದ್ದನು.  ಅಲ್ಲದೆ   ಪತ್ನಿ ರಾಧ ಒಳೊಳ್ಳೆ ಬಟ್ಟೆ ಹಾಕಿಕೊಂಡು ರೆಡಿಯಾಗಿ ಓಡಾಡಿದರೂ  ಇದನ್ನು ಸಹಿಸದೆ ಅನುಮಾನ ವ್ಯಕ್ತಪಡಿಸುತ್ತಿದ್ದನು ಎನ್ನಲಾಗಿದೆ.

ಹಾಗೆಯೇ ಆರೋಪಿ ರಾಜೇಶ್  ಸರಿಯಾಗಿ ಕೆಲಸಕ್ಕೆ ಹೋಗದೇ - ಮನೆಯ ಖರ್ಚಿಗೆ ಹಣವನ್ನೂ ನೀಡದೇ ಮನೆಯಲ್ಲಿಯೇ ಇರುತ್ತಿದ್ದನು. ಇದನ್ನು ಪ್ರಶ್ನಿಸಿದ ಪತ್ನಿ ರಾಧ ಈ ರೀತಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುವುದಾದರೆ ಊರಿಗೆ ಹೋಗು ಎಂದು ಹೇಳಿದ್ದಾರೆ.  ಇದರಿಂದ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಈ ಎಲ್ಲಾ ಕಾರಣಗಳಿಂದ ಹಾಗೂ ರಾಧಾಳ ಮೇಲೆ ಇದ್ದ ಅನುಮಾನದಿಂದ ಆರೋಪಿ ಗಂಡ ರಾಜೇಶ್  27-08-2022 ರಂದು ಬೆಳಗಿನ ಜಾವ ಸುಮಾರು 6-30 ಗಂಟೆ  ವೇಳೆ  ಕಬ್ಬಿಣದ ಮಚ್ಚಿನಿಂದ ರಾಧಾ ಮೇಲೆ ಬಲಭಾಗದ ತಲೆಗೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದ.

ಈ ಬಗ್ಗೆ ಮನೆಯ ಮಾಲೀಕರಾದ ಮಮತಾ ಅವರು ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ತನಿಖಾಧಿಕಾರಿಯಾಗಿದ್ದ ಅಜರುದ್ದೀನ್, ಪೊಲೀಸ್ ಇನ್ಸ್‌ಪೆಕ್ಟರ್ ರವರು ತನಿಖೆ ನಡೆಸಿ ಆರೋಪಿತನ ವಿರುದ್ಧ ಕಲಂ 302 ಐಪಿಸಿ ರೀತ್ಯಾ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣ ವಿಚಾರಣೆ ನಡೆಸಿದ ಮೈಸೂರನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಂ.ರಮೇಶ  ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ ಪ್ರಕರಣದಲ್ಲಿ ಆರೋಪಿತನು ಕಲಂ 304-I ಐಪಿಸಿ ರೀತ್ಯಾ ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿ ತೀರ್ಮಾನಿಸಿ ಆರೋಪಿತನಿಗೆ 7 ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು ರೂ.1,000/- ದಂಡ ವಿಧಿಸಿ ತೀರ್ಪು  ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ರವರು ಸರ್ಕಾರದ ಪರ ವಾದ ಮಂಡಿಸಿದರು.

Key words: mysore court,  sentenced, imprisonment, Husband, kill, wife

Tags :
husbandImprisonmentkillmysore-courtsentencedwife
Next Article