For the best experience, open
https://m.justkannada.in
on your mobile browser.

ಕೋಡಿ ಸೋಮೇಶ್ವರ ದೇವಾಲಯಕ್ಕೇಕೆ ವಿಶೇಷ ಪ್ರಾಮುಖ್ಯತೆ..? ಅದರ ವಿಶಿಷ್ಟತೆ ಏನು? ಇಲ್ಲಿದೆ ನೋಡಿ ಇತಿಹಾಸ

12:12 PM Sep 20, 2024 IST | prashanth
ಕೋಡಿ ಸೋಮೇಶ್ವರ ದೇವಾಲಯಕ್ಕೇಕೆ ವಿಶೇಷ ಪ್ರಾಮುಖ್ಯತೆ    ಅದರ ವಿಶಿಷ್ಟತೆ ಏನು  ಇಲ್ಲಿದೆ ನೋಡಿ ಇತಿಹಾಸ

ಮೈಸೂರು,ಸೆಪ್ಟಂಬರ್,20,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಭರದಿಂದ ಸಿದ್ಧತೆ ಸಾಗಿದೆ. ಈ ಮಧ್ಯೆ ಜಗತ್ ಪ್ರಸಿದ್ಧ ಅಂಬಾವಿಲಾಸ  ಅರಮನೆ ಆವರಣದಲ್ಲಿ ಅನೇಕ ಶಕ್ತಿ ದೇವಾಲಯಗಳಿವೆ, ಆದರೆ ಈ ದೇವಸ್ಥಾನಗಳಲ್ಲಿ  ಕೋಡಿ ಸೋಮೇಶ್ವರ ದೇವಸ್ಥಾನಕ್ಕೂ ರಾಜಮನೆತನಕ್ಕೂ ಅವಿನಾಭಾವ ಸಂಬಂಧವಿದೆ. ರಾಜರ ಎಲ್ಲ ಶುಭ ಕಾರ್ಯಗಳಿಗೂ ಆ ದೈವ ಬೆನ್ನೆಲುಬಾಗಿ ನಿಂತಿದೆ.

ಅರಮನೆ ಅವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಈ ಕೋಡಿ ಸೋಮೇಶ್ವರ ದೇವಾಲಯಕ್ಕೂ ಅರಮನೆಗೂ ಅವಿನಾಭಾವ ಸಂಬಂಧವಿದೆ. ರಾಜವಂಶಸ್ಥರು ಯುದ್ಧಕ್ಕೆ ಹೋಗುವ ಮುನ್ನ ಹಾಗೂ ಅರಮನೆಯಲ್ಲಿ ಯಾವುದೇ ಶುಭ ಸಮಾರಂಭ ಕಾರ್ಯಕ್ರಮ ನಡೆದರೂ ಕೋಡಿ ಸೋಮೇಶ್ವರನಿಗೆ ಮೊದಲ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯೋದು ವಾಡಿಕೆ. ಇಷ್ಟೇ ಅಲ್ಲ ಮೈಸೂರಿನ ರಾಜರು ಅರಮನೆಯಿಂದ ಹೊರ ಹೋಗುವ ವೇಳೆಯೂ ಕೋಡಿ ಸೋಮೇಶ್ವರನಿಗೆ ನಮಸ್ಕರಿಸಿ ತೆರಳೋದು ಪ್ರತೀತಿಯಿದೆ.ಇಷ್ಟೇ ಅಲ್ಲದೆ ನವರಾತ್ರಿಯ ಮೊದಲ ದಿನ ರಾಜರು ಬಳಕೆ ಮಾಡಲಾಗುತ್ತಿದ್ದ ಆಯುಧಗಳು, ಪಟ್ಟದ ಆನೆ, ಕುದುರೆ, ಒಂಟೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಯಾಕೆ ಕೋಡಿ ಸೋಮೇಶ್ವರ ದೇವಾಲಯಕ್ಕೆ ಯದುವಂಶಸ್ಥರು ಪ್ರಾಮುಖ್ಯತೆ ನೀಡುತ್ತಾರೆ ಅಂದರೆ  ಯದುವಂಶ ಆರಂಭಕ್ಕೂ ಕೋಡಿ ಸೋಮೇಶ್ವರ ದೇವಾಲಯಕ್ಕೂ ನಂಟಿದೆ. ಯದುವಂಶಸ್ಥರ ಮೂಲ ಪುರುಷರಾದ ಯದುರಾಯ, ಕೃಷ್ಣರಾಯ ತಮ್ಮ ಕುಲದೈವ, ಪರ್ವತಾಧೀಶ್ವರ ಮೇಲುಕೋಟೆ ಚಲುವರಾಯಸ್ವಾಮಿ ದರ್ಶನಕ್ಕೆ ಆಗಮಿಸಿರುತ್ತಾರೆ. ಆ ವೇಳೆಗೆ ಹದಿನಾರು ಸಂಸ್ಥಾನದ ಚಲುವಾಜಮ್ಮಣಿಗೆ ಕಾರ್ಗಳ್ಳಿ ಮಾರನಾಯಕ ತೊಂದರೆ ಕೊಡುತ್ತಿರುತ್ತಾನೆ. ಇದೇ ವೇಳೆಗೆ ಮೈಸೂರು ಭಾಗಕ್ಕೆ ಆಗಮಿಸಿದ್ದ ಈ ಇಬ್ಬರು ಕೋಡಿ ಸೋಮೇಶ್ವರ ದೇವಾಲಯ ಮುಂಭಾಗ ಮಲಗಿದ್ದ ವೇಳೆ ಸಾಕ್ಷಾತ್ ಚಲುವರಾಯಸ್ವಾಮಿಯೇ  ದಾಸಯ್ಯನ ರೂಪದಲ್ಲಿ ಬಂದು ಮಾರನಾಯಕನನ್ನ ಸೆದೆ ಬಡೆಯುವಂತೆ ಪ್ರೇರೆಪಣೆ ಆಗುತ್ತದೆ.  ಅದರಂತೆ ಮಾರನಾಯಕನನ್ನ ಸದೆ ಬಡಿಯುವ ಇಬ್ಬರು, ಹದಿನಾರು ಮಹಾ ಸಂಸ್ಥಾನದ ಚಲುವಾಜಮ್ಮಣಿಯ ಮಗಳಾದ ಕೆಂಪ ಚಲುವಾಜಮ್ಮಣಿಯನ್ನ ಮದುವೆಯಾಗುತ್ತಾರೆ. ಇಲ್ಲಿಂದ ಮೈಸೂರಿನ ಯದುವಂಶವು ಪ್ರಾರಂಭವಾಗುತ್ತದೆ.

ಈ ಕಾರಣಕ್ಕೆ ಮೈಸೂರಿನ ಯದುವಂಶಸ್ಥರು ಕೋಡಿ ಸೋಮೇಶ್ವರ ದೇವಾಲಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಆಯುಧ ಪೂಜೆ ದಿನದಂದು ಕೂಡ ಇಲ್ಲಿ ಆಯುಧಗಳನ್ನ ಶುಚಿಗೊಳಿಸಲಾಗುತ್ತದೆ. ಅಲ್ಲದೆ ನವರಾತ್ರಿ ವೇಳೆ ಮಹರಾಜರು ಮಾಡುವ ಕಳಸ ಪೂಜೆಗೂ ಇಲ್ಲಿಂದಲೇ ನೀರನ್ನ ಕೊಂಡೊಯ್ಯಲಾಗುತ್ತದೆ.

Key words: mysore dasara, Ambavilas palace, Kodi Someshwara, Temple

Tags :

.