HomeBreaking NewsLatest NewsPoliticsSportsCrimeCinema

MYSORE DASARA: ಕಾಡಾನೆ ‘ಮೂಡಿಗೆರೆ ಭೈರ “ ಸಾಕಾನೆ ʼಏಕಲವ್ಯʼನಾಗಿ ಬದಲಾದ ರೋಚಕ ಕಥೆ..!

03:44 PM Jul 22, 2024 IST | mahesh

 

MYSORE DASARA: An interesting story of a wild elephant  'Mudigere Bhairava' turning into Sakane 'Ekalavya'.

ಮೈಸೂರು,ಜು.22,2024: (www.justkannada.in news)  ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ‘ಏಕಲವ್ಯ ಆನೆಯ ಕಥೆ ಕುತೂಹಲಕಾರಿಯಾಗಿದೆ. ಸ್ವೌಮ್ಯ ಸ್ವಭಾವದಿಂದ ಭವಿಷ್ಯದಲ್ಲಿ ದಸರಾ ಮಹೋತ್ಸವದಲ್ಲಿ ಮಹತ್ತರ ಜವಾಬ್ದಾರಿ ನಿಭಾಯಿಸುವ ಭರವಸೆ ಮೂಡಿಸಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ೩೯ ವರ್ಷದ ‘ಏಕಲವ್ಯ ಈ ವರ್ಷದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮಗಳಿಗೆ ಬಂದು ಉಪಟಳ ನೀಡುತ್ತಿದ್ದ ‘ಮೂಡಿಗೆರೆ ಭೈರ ಎಂದ ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಆನೆಯೇ ಈಗ  ‘ಏಕಲವ್ಯʼ ನಾಗಿರೋದು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ೨೦೨೦ರಿಂದ ಎರಡು ವರ್ಷ ಪದೇ ಪದೇ ಕಾಣಿಸಿಕೊಂಡು ಸ್ಥಳೀಯರಲ್ಲಿ  ಆತಂಕದ ವಾತಾವರಣ ಸೃಷ್ಠಿಸಿ, ಆಕಸ್ಮಿಕವಾಗಿ ಎದುರಾದ ಮೂವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿದ್ದ.

ಆ ಸಂದರ್ಭದಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿದ್ದವಾದರೂ, ಮೂವರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಆನೆ ‘ಭೈರನೇ ಎಂದು ಖಚಿತವಾಗಿಲ್ಲದೇ ಇದ್ದರೂ, ಸ್ಥಳೀಯರು ಮಾತ್ರ ಭೈರನತ್ತ ಬೆರಳು ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಬಳಿ ಸ್ಥಳೀಯರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು.

ಸ್ಥಳೀಯರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ೨೦೨೧ರ ಜ.೨೫ರಿಂದ ಮೂಡಿಗೆರೆಯ ಸುತ್ತ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ದಸರಾ ಗಜಪಡೆ ನಾಯಕ ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ ಹಾಗೂ ಹರ್ಷನೊಂದಿಗೆ ಪಶು ವೈದ್ಯ ಡಾ.ರಮೇಶ ಹಾಗೂ ಇನ್ನಿತರರ ತಂಡ ಕಾರ್ಯಾಚರಣೆ ಆರಂಭಿಸಿತ್ತು.

೬ ದಿನದಲ್ಲೇ ಭೈರನೊಂದಿಗೆ ಉಪಟಳ ನೀಡುತ್ತಿದ್ದ ಮತ್ತೊಂದು ಆನೆಯನ್ನು ಸೆರೆ ಹಿಡಿಯಲು ಮುಂದಾಗಿದ್ದ ಅರಣ್ಯ ಇಲಾಖೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಭೈರನನ್ನು ಮಾತ್ರ ಹಿಡಿಯುವಂತೆ ಒತ್ತಾಯಿಸಿದ್ದರು. ಮತ್ತೊಂದು ಆನೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರತಿಪಾದಿಸಿದ್ದರು.

ಸ್ಥಳೀಯರ ಭಾವನೆಯನ್ನು ಗೌರವಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ‘ಮೂಡಿಗೆರೆ ಭೈರನ ಸೆರೆ ಹಿಡಿಯಲು ಟ್ರ್ಯಾಕ್ ಕಂಡು ಹಿಡಿದು, ೨೦೨೨ರ ಫೆ.೧೨ರಂದು ಮೂಡಿಗೆರೆ ಬಳಿ ಆರಂಭಿಸಿದ ಅರಣ್ಯ ಇಲಾಖೆ ಭೈರನನ್ನು ಗುರುತಿಸಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿತ್ತು.  ಬಳಿಕ ಅದನ್ನು ಮತ್ತಿಗೋಡು ಕ್ಯಾಂಪ್‌ಗೆ ತಂದು ಕ್ರಾಲ್‌ನಲ್ಲಿಟ್ಟು ಪಳಗಿಸಲಾಗಿತ್ತು.

ಸೆರೆ ಹಿಡಿದ ಒಂದೇ ವರ್ಷದೊಳಗೆ ಸ್ವೌಮ್ಯ ಸ್ವಭಾವಿಯಾಗಿ ಮಾರ್ಪಾಡಾದ ಮೂಡಿಗೆರೆ ಭೈರನಿಗೆ ‘ಏಕಲವ್ಯ ಎಂದು ನಾಮಕರಣ ಮಾಡಲಾಯಿತು. ಈಗಾಗಲೇ ೮ ತಿಂಗಳ ಹಿಂದೆಯೇ ಕ್ರಾಲ್‌ನಿಂದ ಹೊರಗೆ ಬಂದಿರುವ ಏಕಲವ್ಯ,  ಮಾವುತ ಸೃಜನ್ ಹಾಗೂ ಎಸ್.ಇದಾಯತ್ ಅವರ ಆರೈಕೆಯಲ್ಲಿ ಪಳಗಿದೆ. ಹೇಳಿದಂತೆ ಕೇಳುವುದರೊಂದಿಗೆ ಮೃಧು ಸ್ವಭಾವಿಯಾಗಿ ಮಾರ್ಪಟ್ಟಿದೆ.

೧೮ ತಿಂಗಳ ಹಿಂದೆ ಕಾಡಾನೆ, ಇದೀಗ ಸಾಕಾನೆ ‘ಏಕಲವ್ಯನಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದೆ. ಹಳೆಯದನ್ನು ಮರೆತು ಹೊಸ ಅಧ್ಯಾಯ ಬರೆಯಲು ತವಕಿಸುತ್ತಿರುವ ಏಕಲವ್ಯ ಅಧಿಕಾರಿಗಳು ಮಾತ್ರವಲ್ಲದೆ, ಮತ್ತಿಗೋಡು ಕ್ಯಾಂಪ್‌ನಲ್ಲಿರುವ ಎಲ್ಲಾ ಆನೆಗಳ ಮಾವುತ, ಕಾವಾಡಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ತಂಡದಲ್ಲಿಯೇ ಕರೆತರಬೇಕೆಂದು ಏಕಲವ್ಯ ಆನೆಯನ್ನು ಗುರುತಿಸಲಾಗಿದೆ. ನಿರೀಕ್ಷೆಯಂತೆ ಮೊದಲ ತಂಡದಲ್ಲಿ ಆಗಮಿಸಿದರೆ, ಸುಮಾರು ೫೦ ದಿನ ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಡುವುದರೊಂದಿಗೆ ದಸರಾ ಮಹೋತ್ಸವದ ತರಬೇತಿ ಪಡೆಯುತ್ತದೆ. ಇಲ್ಲದಿದ್ದರೆ ಎರಡನೇ ತಂಡದಲ್ಲಿ ಬಂದರೂ ಮುಂಬರುವ ವರ್ಷದಲ್ಲಿ ದಸರಾ ಮಹೋತ್ಸವಕ್ಕೆ ಬೇಕಾದ ತರಬೇತಿ ಪಡೆಯಲು ಸಹಕಾರಿಯಾಗುತ್ತದೆ.

ಏಕಲವ್ಯನ ಬಯೋಡೇಟಾ

ಪ್ರಸ್ತುತ ಏಕಲವ್ಯನಿಗೆ ೩೯ ವರ್ಷ ವಯಸ್ಸಾಗಿದೆ. ೪,೧೫೦ ಕೆಜಿ ತೂಕ, ೨.೮೩ ಮೀಟರ್ ಎತ್ತರ, ೩.೭೦ ಮೀಟರ್ ಉದ್ದವಿದೆ. ಸಮತಟ್ಟಾದ ಮೈ ಹೊಂದಿದೆ. ಅಲ್ಲದೆ, ಅದರ ನಡಿಗೆಯಲ್ಲಿ ರಾಜಗಾಂಭಿರ್ಯವಿದೆ.  ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬೇಕಾದ ಎಲ್ಲಾ ಅರ್ಹತೆ ಏಕಲವ್ಯನಿಗೆ ಇದೆ.

key words: MYSORE DASARA, an interesting story, of a wild elephant, 'Mundiger Bhairava', turning into, Sakane, 'Ekalavya'.

 

Tags :
'Ekalavya'.'Mundiger Bhairava'an interesting storymysore dasaraof a wild elephantSakaneturning into
Next Article