For the best experience, open
https://m.justkannada.in
on your mobile browser.

ಸ್ವದೇಶಿ ದರ್ಶನ್ ಯೋಜನೆಯಡಿ ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 2ನೇ ಹಂತದ ಡಿಪಿಆರ್ ಗೆ ಜಿಲ್ಲಾಧಿಕಾರಿ ಸೂಚನೆ

03:48 PM Aug 28, 2024 IST | prashanth
ಸ್ವದೇಶಿ ದರ್ಶನ್ ಯೋಜನೆಯಡಿ ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 2ನೇ ಹಂತದ ಡಿಪಿಆರ್ ಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು ಆಗಸ್ಟ್, 28,2024 (www.justkannada.in): ಮೈಸೂರು ಕರ್ನಾಟಕದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ, ಸ್ವಚ್ಛ, ಸಾಂಸ್ಕೃತಿಕವಾಗಿ ಮತ್ತು ಪರಂಪರೆಯ ಶ್ರೀಮಂತ ನಗರವಾಗಿದ್ದು ಸ್ವದೇಶ್ ದರ್ಶನ್ 2.0 ಯೋಜನೆಯಡಿ ಮೈಸೂರಿನ  ಹಳೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೈಸೂರು ರಾಜರ ಗತವೈಭವ,  ಪರಂಪರೆ ಹಾಗೂ ಇತಿಹಾಸ ಬಿಂಬಿಸುವ ನಿಟ್ಟಿನಲ್ಲಿ ಮರು ಡಿಪಿಆರ್ ಸಿದ್ಧಪಡಿಸಿ ಸಲ್ಲಿಸುವಂತೆ  ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸ್ವದೇಶ್ ದರ್ಶನ್ 2.0 ಯೋಜನೆ ಡಿಪಿಆರ್ 2 ಸಿದ್ಧಪಡಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಈ ಯೋಜನೆಯಡಿ ಮೈಸೂರು ಸೇರಿದಂತೆ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 70  ಕೋಟಿ ಅನುದಾನ ಬಿಡುಗಡೆಯಾಗಿದ್ದು ಸ್ವದೇಶ್ ದರ್ಶನ್ ಯೋಜನೆಯಡಿ ಮೊದಲನೇ ಹಂತದಲ್ಲಿ ಟಾಂಗ್ ರೈಡ್ ಹಾಗೂ  ಎಕೋಲಜಿಕಲ್ ಎಕ್ಸ್ ಪಿರಿನ್ಸ್  ವಲಯಕ್ಕೆ ರೂ 21.17 ಕೋಟಿ ಅನುದಾನಕ್ಕೆ ಡಿಪಿಆರ್ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈಗ ಎರಡನೇ ಹಂತದಲ್ಲಿ ಮೈಸೂರಿನ ನಗರದ ಹೃದಯ ಭಾಗದಲ್ಲಿರುವ ಹಳೆಯ ಪಾರಂಪರಿಕ ಜಿಲ್ಲಾಧಿಕಾರಿ ಕಚೇರಿಯನ್ನು  ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಮಾಡಲು ಮೈಸೂರು ರಾಜರು, ದಿವಾನ್ ರು, ಆಡಳಿತಗಾರರು ನೀಡಿರುವ ಆಡಳಿತ ಸುಧಾರಣೆ, ಕೊಡುಗೆಗಳು ಹಾಗೂ ಮೈಸೂರು ಗತವೈಭವ  ಹಾಗೂ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಅವರು ಸ್ಥಳೀಯ ಪ್ರವಾಸೋದ್ಯಮ ಸಕ್ರ್ಯೂಟ್‌ ಮತ್ತು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು ಹಳೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮೈಸೂರು ಇತಿಹಾಸ, ರಾಜ ಪರಂಪರೆ ಹಾಗೂ ಗತಾ ವೈಭವ  ಬಿಂಬಿಸುವ ಅನುಸಾರ  ಡಿಪಿಆರ್ ಸಿದ್ಧಪಡಿಸಿಲು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮೈಸೂರು ವಿಭಾಗದ ಉಪ ಅರಣ್ಯಾಧಿಕಾರಿಗಳಾದ ಡಾ. ಬಸವರಾಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ರುದ್ರೇಶ್, ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ.ಎಸ್ ಸುಬ್ರಹ್ಮಣ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: mysore DC, 2nd phase, DPR, Swadeshi Darshan Yojana

Tags :

.