ಮೈಸೂರು ಜಿಲ್ಲೆಯಲ್ಲಿ ಝೀಕಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟೆಚ್ಚರ- ಡಿಎಚ್ ಓ ಡಾ.ಕುಮಾರಸ್ವಾಮಿ.
ಮೈಸೂರು,ನವೆಂಬರ್,6,2023(www.justkannada.in): ರಾಜ್ಯಕ್ಕೆ ಝೀಕಾ ವೈರಸ್ ಎಂಬ ಹೊಸ ತಳಿ ಕಾಲಿಟ್ಟಿದ್ದು, ಮೈಸೂರು ಜಿಲ್ಲೆಯಲ್ಲೂ ಝೀಕಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದರು.
ಈ ಕುರಿತು ಮಾತನಾಡಿದ ಡಿಎಚ್ ಓ ಡಾ.ಕುಮಾರಸ್ವಾಮಿ, ನಿಫಾ ವೈರಸ್ ಆಯ್ತು ಈಗ ಝೀಕಾ ವೈರಸ್ ಭೀತಿ ಎದುರಾಗಿದೆ. ಚಿಕ್ಕಬಳ್ಳಾಪುರದ ತಲಕಾಯಲಬೆಟ್ಟ ಗ್ರಾಮದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದ್ದು ತಲೆನೋವು,ವಾಂತಿ,ಜ್ವರ, ಕೆಮ್ಮು ಸುಸ್ತು ವೈರಸ್ ನ ಲಕ್ಷಣಗಳಾಗಿವೆ. ರಾಜ್ಯದ ಹಲವೆಡೆ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಬೇರೆಡೆ ಝೀಕಾ ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಅಂತೆಯೇ ಮೈಸೂರು ಜಿಲ್ಲೆಯಲ್ಲೂ ಕೂಡ ಝೀಕಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಸದ್ಯಕ್ಕೆ ಮೈಸೂರಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ನಾವು ಈಗಾಗಲೇ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ನಮ್ಮ ಜಿಲ್ಲೆಗೆ ಪ್ರವೇಶ ಮಾಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಯಾವುದೇ ಜ್ವರ, ತಲೆ ನೋವು ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರನ್ನ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ರಕ್ತ ಪರೀಕ್ಷೆಯನ್ನ ಮಾಡಿಕೊಳ್ಳಬೇಕು. ಕಾಯಿಲೆ ಬರುವುದಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಈಗಾಗಲೇ ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹಳ್ಳಿ ಹಳ್ಳಿಗಳಲ್ಲೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ವೈದ್ಯ ಸಿಬ್ಬಂದಿಗಳು ಕೂಡ ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿದ್ದಾರೆ. ಅಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಡಾ.ಕುಮಾರಸ್ವಾಮಿ ಮಾಹಿತಿ ನೀಡಿದರು.
Key words: Mysore district - alert - prevent -Zika virus-DHO- Dr. Kumaraswamy.