For the best experience, open
https://m.justkannada.in
on your mobile browser.

ಮೈಸೂರು: ‘ಯೋಗ’ದ ಹೆಸರಲ್ಲಿ’ಅಕ್ರಮ’ ಹಣ ಗಳಿಕೆ ಮಾರ್ಗ ಕಂಡುಕೊಂಡ ಕೆಲ ವಿದೇಶಿಗರು !

10:42 AM Dec 08, 2023 IST | thinkbigh
ಮೈಸೂರು  ‘ಯೋಗ’ದ ಹೆಸರಲ್ಲಿ’ಅಕ್ರಮ’ ಹಣ ಗಳಿಕೆ ಮಾರ್ಗ ಕಂಡುಕೊಂಡ ಕೆಲ ವಿದೇಶಿಗರು

ಮೈಸೂರು, ಡಿಸೆಂಬರ್ 08, 2023 (www.justkannada.in): ಯೋಗ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಮೈಸೂರಿಗೆ ಭೇಟಿ ನೀಡುವ ಕೆಲ ಪ್ರವಾಸಿಗರು ವೀಸಾ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಹಣ ಗಳಿಕೆ ಮಾರ್ಗ ಕಂಡುಕೊಂಡಿದ್ದಾರೆ!

ಹೌದು, ಫೋಟೋಗ್ರಫಿ ಮೂಲಕ ಹಣ ಗಳಿಕೆ ಮಾರ್ಗ ಕಂಡುಕೊಂಡಿರುವ ಕೆಲ ವಿದೇಶಿಗಳು ಮೈಸೂರಿನಲ್ಲಿ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ವಿದ್ಯಾರ್ಥಿ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿ ಫೋಟೋಗ್ರಫಿ ಮೂಲಕ ಅಕ್ರಮವಾಗಿ ಹಣ ಕಳಿಸುತ್ತಿದ್ದಾರೆ.

ವಿದೇಶಿಗರು ಅಕ್ರಮವಾಗಿ ದೇಶದೊಳಗೆ ಕೆಲಸ ಮಾಡುವುದು ಅಥವಾ ಹಣ ಗಳಿಸುವುದನ್ನು ತಡೆಯುವ ಕಠಿಣ ಕಾನೂನುಗಳ ಹೊರತಾಗಿಯೂ ಮೈಸೂರಿನಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವರು ದೇಶಕ್ಕೆ ತೆರಿಗೆ ವಂಚಿಸಿ ಹಣ ಗಳಿಸುತ್ತಿದ್ದಾರೆ.

ಮೈಸೂರನ್ನು 'ಅಷ್ಟಾಂಗ ಯೋಗ' ರಾಜಧಾನಿ ಎಂದು ಕರೆಯಲಾಗುತ್ತದೆ. ಹೀಗಾಗಿ ಸಾವಿರಾರು ವಿದೇಶಿಗರು ಯೋಗ ಕಲಿಯಲು ಹಾಗೂ ಅಧಿಕೃತವಾಗಿ ಪ್ರಮಾಣಪತ್ರಗಳನ್ನು ಪಡೆಯಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅರಮನೆ ನಗರರಿಗೆ ಭೇಟಿ ನೀಡುತ್ತಾರೆ. ಇದರ ನಡುವೆ ಕೆಲವು ವಿದೇಶಿ ಪ್ರಜೆಗಳು ಯೋಗವನ್ನು ಕಲಿಯುವ ಅಥವಾ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ನೆಪದಲ್ಲಿ ದೇಶದ ಕಾನೂನನ್ನು ಉಲ್ಲಂಘಿಸುವ ಮೂಲಕ ತ್ವರಿತ ಆದಾಯ ಗಳಿಸುವ ಅವಕಾಶ ಸೃಷ್ಟಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಯೋಗ ತರಗತಿಗಳಿಗೆ ದಾಖಲಾದ ಅಥವಾ ಪ್ರವಾಸಿ ವೀಸಾದಲ್ಲಿ ನಗರಕ್ಕೆ ಭೇಟಿ ನೀಡಿದ ಅನೇಕ ವಿದೇಶಿ ಪ್ರಜೆಗಳು ಫೋಟೋಗ್ರಫಿ ಪ್ರೋಜೆಕ್ಟ್ ಗಳ ಮೂಲಕ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ. ಜತೆಗೆ ಇದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ.  ಇದು ಸ್ಥಳೀಯ ಛಾಯಾಗ್ರಾಹಕರಿಗೂ ಸಿಗುತ್ತಿದ್ದ ಕೆಲಸಕ್ಕೆ ಕತ್ತರಿ ಹಾಕಿದಂತಾಗಿದೆ. ಜತೆಗೆ ತೆರಿಗೆ ರೂಪದಲ್ಲಿ ಬರುತ್ತಿದ್ದ ವರಮಾನಕ್ಕೂ ಕುತ್ತು ತರುತ್ತಿದೆ.

ಸ್ಥಳೀಯ ಫೋಟೋಗ್ರಾಫರ್ ಗಣೇಶ್ ಶಂಕರ್ ಅವರ ಪ್ರಕಾರ, ಕೆಲ ವಿದೇಶಿಗರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಪ್ರವಾಸಿ ಹಾಗೂ ವಿದ್ಯಾರ್ಥಿ ವೀಸಾ ಮೂಲಕ ಮೈಸೂರಿಗೆ ಆಗಮಿಸಿರುವ ಅವರು, ಇಲ್ಲಿ ಅಕ್ರಮವಾಗಿ ಫೋಟೋಗ್ರಫಿ ವ್ಯವಹಾರ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ಇದರಿಂದ ಸ್ಥಳೀಯ ಫೋಟೋಗ್ರಾಫರ್ ಗಳಿಗೆ ಸಿಗುತ್ತಿದ್ದ ಕೆಲಸ ಸಿಗದಂತಾಗಿದೆ.’’ ಎನ್ನುತ್ತಾರೆ.

ಮತ್ತೊಬ್ಬ ಸ್ಥಳೀಯ ಫೋಟೋಗ್ರಾಫರ್ ಪ್ರಕಾರ, ‘’ ಒಬ್ಬರಿಗೆ ಕನಿಷ್ಠ 60ರಿಂದ 90 ಸಾವಿರ ರೂ.ವರೆಗೆ ದರ ವಿಧಿಸುತ್ತಾರೆ. ಈ ಮೂಲಕ ಕೆಲವೇ ದಿನಗಳಲ್ಲಿಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಯೋಗಕ್ಕಾಗಿ ನಗರಕ್ಕೆ ಭೇಟಿ ನೀಡುವವರು ಕ್ಯಾಮೆರಾ- ಲೆನ್ಸ್ ತಮ್ಮೊಟ್ಟಿಗೆ ತಂದು ಇಲ್ಲಿ ಅಕ್ರಮ ಹಣ ಗಳಿಕೆ ಮಾರ್ಗ ಕಂಡುಕೊಂಡಿದ್ದಾರೆ. ಜತೆಗೆ ನಗರದ ಎಲ್ಲೆಂದರಲ್ಲಿ ಯಾವುದೇ ಅನುಮತಿ ಪಡೆಯದೇ ಫೋಟೋ ಶೂಟ್ ಮಾಡುತ್ತಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ರ ಕ್ರಮ ವಹಿಸಬೇಕು,’’ ಎಂದು ಒತ್ತಾಯಿಸಿದ್ದಾರೆ.

Tags :

.