For the best experience, open
https://m.justkannada.in
on your mobile browser.

ಮೈಸೂರು ಲ್ಯಾಂಪ್ಸ್: ಖಾಸಗಿ ಒಡೆತನದ ಷೇರು ಖರೀದಿಗೆ ಕ್ರಮ- ಸಚಿವ ಎಂ.ಬಿ ಪಾಟೀಲ್.

04:30 PM Feb 13, 2024 IST | prashanth
ಮೈಸೂರು ಲ್ಯಾಂಪ್ಸ್  ಖಾಸಗಿ ಒಡೆತನದ ಷೇರು ಖರೀದಿಗೆ ಕ್ರಮ  ಸಚಿವ ಎಂ ಬಿ ಪಾಟೀಲ್

ಬೆಂಗಳೂರು, ಫೆಬ್ರವರಿ,13,2024(www.justkannada.in): ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇ5.6ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿದ್ದು ಅಷ್ಟೂ ಷೇರುಗಳನ್ನು ಸರ್ಕಾರವೇ ಖರೀದಿ ಮಾಡಿ ಸಂಸ್ಥೆಯನ್ನು ಶೇ.100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನ ಪರಿಷತ್ ಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ ನ ಎಸ್.ಎಲ್.ಬೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್ ಅವರು ಮೈಸೂರು ಲ್ಯಾಂಪ್ಸ್ ಗೆ ಸಂಬಂಧಿಸಿದಂತೆ ಸರ್ಕಾರ ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನು ಇಡುತ್ತಿದ್ದು, ಅದರ ಆಸ್ತಿ ಯಾವುದೇ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಈ ಕಂಪನಿಯಲ್ಲಿ ಸರ್ಕಾರದ ಷೇರು ಪ್ರಮಾಣ ಶೇ 91.07ರಷ್ಟು ಇದೆ. ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆ ಶೇ 3.33ರಷ್ಟು ಷೇರು ಬಂಡವಾಳ ಹೊಂದಿದೆ. ಉಳಿದ ಶೇ 5.6ರಷ್ಟು ಷೇರು ಬಂಡವಾಳ ಸಾರ್ವಜನಿಕರದ್ದಾಗಿದೆ ಎಂದು ಅವರು ವಿವರಿಸಿದರು.

ಮೈಸೂರು ಲ್ಯಾಂಪ್ಸ್ ಮತ್ತು ಎನ್‌ ಜಿಇಎಫ್ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ಸಾರ್ವಜನಿಕ ಉದ್ದೇಶದ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು 2021ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಇವರಲ್ಲದೆ, ಸರ್ಕಾರದ ಕಡೆಯಿಂದ ಏಳು ಮತ್ತು ನಾಗರಿಕರ ವಲಯದಿಂದ ಐದು ಟ್ರಸ್ಟಿಗಳನ್ನು ನೇಮಿಸಲು ಅವಕಾಶ ಇದೆ. ಇದುವರೆಗೂ ಈ ಟ್ರಸ್ಟ್ ಗೆ ಯಾವುದೇ ಚಟುವಟಿಕೆಗಳನ್ನು ಸರ್ಕಾರದ ಕಡೆಯಿಂದ ವಹಿಸಿರುವುದಿಲ್ಲ ಎಂದು ಅವರು ವಿವರಿಸಿದರು.

ಮೊದಲ ಆದ್ಯತೆ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವುದು. ಅದರ ನಂತರವೇ ಅದರ ಅಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಒಟ್ಟಿನಲ್ಲಿ ಖಾಸಗಿಯವರಿಗಂತೂ ಕೊಡುವುದಿಲ್ಲ ಎಂದು ತಿಳಿಸಿದರು.

Key words: Mysore Lamps- Action - purchase - privately –owned- shares – Minister- MB Patil

Tags :

.