ಸಂಸತ್ 'ಕೈ' ಅಭ್ಯರ್ಥಿ: ಸಚಿವರ ಭಿನ್ನರಾಗ..
ಮೈಸೂರು,ಫೆಬ್ರವರಿ,6,2024(www.justkannada.in): ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು ಎಲ್ಲಾ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಈಗಿನಿಂದಲೇ ಶುರುವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಸಚಿವರ ಸ್ಪರ್ಧೆ ಬಗ್ಗೆಯೂ ತೀವ್ರ ಚರ್ಚೆ ನಡೆಯುತ್ತಿದ್ದು ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಿನ್ನ ಹೇಳಿಕೆಗಳನ್ನ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಲೋಕಸಭೆಯಲ್ಲಿ ಸಚಿವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಸಚಿವರು ಸ್ಪರ್ಧೆ ಮಾಡಿದರೆ ತಪ್ಪೇನು ? ಎಂದು ಪ್ರಶ್ನಿಸಿದ್ದಾರೆ. ಕೆಲವು ಆಂತರಿಕ ಚರ್ಚೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್ ನಿರ್ಧಾರ. ಅವರ ತೀರ್ಮಾನಕ್ಕೆ ಎಲ್ಲರೂ ಬದ್ದ. ಅವರು ಹೇಳಿದರೆ ಸ್ಪರ್ಧೆ ಮಾಡಲೇ ಬೇಕು. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ- ಸಚಿವ ಮಧು ಬಂಗಾರಪ್ಪ.
ಇತ್ತ ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಯಾರು ಗೆಲ್ಲುತ್ತಾರೋ ಅವರನ್ನು ನಿಲ್ಲಿಸುತ್ತೇವೆ. ಮಿನಿಸ್ಟರ್ ಆದ್ರೆ ಏನು..? ಕಾರ್ಯಕರ್ತ ಆದ್ರೆ ಏನು..? ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ ಎಂದಿದ್ದಾರೆ.
ಹಾಗೆಯೇ ಸಚಿವರ ಸ್ಫರ್ಧೆ ಬಗ್ಗೆ ಸಿಎಂ ಡಿಸಿಎಂ ನೋಡಿಕೊಳ್ಳುತ್ತಾರೆ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ..? ಯಾರನ್ನೂ ನಿಲ್ಲಿ ಅನ್ನೋತ್ತದೆಯೋ ಅವರು ನಿಲ್ಲುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಧ್ರುವೀಕರಣ ಇಲ್ಲ ಎಂದು ತಿಳಿಸಿದ್ದಾರೆ.
ಸಚಿವರ ಸ್ಪರ್ಧೆ ಬಗ್ಗೆ ದಿನೇಶ್ ಗುಂಡೂರಾವ್ ಒಳ್ಳೆಯ ಬೆಳವಣಿಗೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೇ ಇತ್ತ ಸಚಿವ ಮಧು ಬಂಗಾರಪ್ಪ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತೇವೆ ಎನ್ನುವ ಮೂಲಕ ಭಿನ್ನ ಹೇಳಿಕೆ ನೀಡಿದ್ದಾರೆ.
Key words: mysore-Minister-Dinesh Gundurao-Madhu Bangarappa