For the best experience, open
https://m.justkannada.in
on your mobile browser.

ಮುಡಾ ಹಗರಣ ನೆಪದಲ್ಲಿ ಸಿದ್ದರಾಮಯ್ಯ ಅವರ ತೇಜೋವಧೆ: ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ- ಕೆ.ಎಸ್.ಶಿವರಾಮು ವಾಗ್ದಾಳಿ

03:08 PM Jul 20, 2024 IST | prashanth
ಮುಡಾ ಹಗರಣ ನೆಪದಲ್ಲಿ ಸಿದ್ದರಾಮಯ್ಯ ಅವರ ತೇಜೋವಧೆ  ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ  ಕೆ ಎಸ್ ಶಿವರಾಮು ವಾಗ್ದಾಳಿ

ಮೈಸೂರು,ಜುಲೈ, 20,2024 (www.justkannada.in): ಮುಡಾ ಹಗರಣದ ನೆಪದಲ್ಲಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ. ಐಟಿ, ಇಡಿ, ಸಿಬಿಐ ಬಳಸಿ ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರವನ್ನ ಬಿಜೆಪಿ ಜೆಡಿಎಸ್ ಮಾಡಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜಾ.ದಳದ ನಾಯಕರು ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ,ಅಹಿಂದ ಸಂಘಟನೆಗಳ ನೇತೃತ್ವದಲ್ಲಿ ಪೊರಕೆ ಚಳವಳಿ ನಡೆಸಲಾಯಿತು.

ಮುಡಾ ಕಚೇರಿ ಎಡಭಾಗದಲ್ಲಿ ಹಾಕಲಾಗಿದ್ದ ಶಾಮಿಯಾನದಡಿ ಕುಳಿತ ಪ್ರತಿಭಟನಾಕಾರರು ಪೊರಕೆ ಹಿಡಿದು ಘೋಷಣೆಗಳನ್ನು ಕೂಗಿದರು. ಬಿಜೆಪಿ-ಜನತಾದಳದ ನಾಯಕರಿಗೆ ಧಿಕ್ಕಾರ, ಸಿಎಂ ಹೆಸರಿಗೆ ಮಸಿ ಬಳಿಯುತ್ತಿರುವ ಬಿಜೆಪಿ ಮುಖಂಡರಿಗೆ ಧಿಕ್ಕಾರ, ಸಾಮಾಜಿಕ ನ್ಯಾಯದ ಸಿದ್ದರಾಮಯ್ಯರಿಗೆ ಜಯವಾಗಲಿ ಮೊದಲಾದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಮುಡಾದಲ್ಲಿ ನಡೆದಿರುವ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ತೇಜೋವಧೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇಡಿ, ಸಿಬಿಐ, ಐಟಿಯನ್ನು ದುರ್ಬಳಕೆ ಮಾಡಿಕೊಂಡು ಸಿಎಂ ಸ್ಥಾನದಿಂದ ಕೆಳಗಿಸುವ ಹುನ್ನಾರ ಮಾಡಲಾಗುತ್ತಿದೆ. ಇದು ಅಹಿಂದ ಸಮುದಾಯಗಳಿಗೆ ಸಹಿಸಲಾಧ್ಯವಾದ ನೋವನ್ನುಂಟು ಮಾಡುತ್ತಿದೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಎದುರಿಸಬೇಕಾಗುತ್ತದೆ  ಎಂದು ಎಚ್ಚರಿಸಿದರು.

ಅಹಿಂದ ನಾಯಕನೊಬ್ಬ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ಬಿಜೆಪಿ, ಜೆಡಿಎಸ್ ಗೆ ಆಗುತ್ತಿಲ್ಲ. ಹೀಗಾಗಿ ಅಸೂಯೆಯಿಂದ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಕಾರಣಕ್ಕಾಗಿ ಅವರನ್ನು ಮತ್ತು ಅವರ ಸರ್ಕಾರವನ್ನು (ಇಡಿ ಮತ್ತು ಐಟಿಯನ್ನು ಬಳಿಸಿಕೊಂಡು) ಅಸ್ಥಿರಗೊಳಿಸಲು ಹೊರಟಿರುವುದು ತೀವ್ರ ಖಂಡನೀಯ. ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವ ನೈತಿಕತೆ ಬಿಜೆಪಿ ಮತ್ತು ಜೆಡಿಎಸ್‍ ಗೆ ಇದೆಯೇ? ಎಂದು ಕೆ.ಎಸ್ ಶಿವರಾಮು ಪ್ರಶ್ನಿಸಿದರು.

2021 ರಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರದ ಪಿತಾಮಹ ಯಾರು? 2021ರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಧ್ವನಿ ಎತ್ತುತ್ತಲಿಲ್ಲ ಏಕೆ? ಆಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದರು. ಅವರ  ಪುತ್ರ ಬಿ.ವೈವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಆಗಿನ ಮುಡಾ ಆಯುಕ್ತರಾಗಿದ್ದ ಡಾ.ಡಿ.ಬಿ.ನಟೇಶ್ ರವರು ಮತ್ತು ಅವರ ಗುಂಪನ್ನು ಕಟ್ಟಿಕೊಂಡು ಮುಡಾವನ್ನು ಅಧ್ವಾನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ ಎಂದು ಕೆ.ಎಸ್ ಶಿವರಾಮ್ ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ಧನ್, ದಸಂಸ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ಕಂದಹಳ್ಳಿ ನಾರಾಯಣ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಎಸ್.ರಾಜೇಶ್, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ಯೋಗೇಶ್ ಉಪ್ಪಾರ್, ವಿಶ್ವಕರ್ಮ ಸಂಘದ ಜಿಲ್ಲಾ ಅಧ್ಯಕ್ಷ ಮೊಗಣ್ಣಾಚಾರ್, ನಗರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಆರ್.ನಾಗೇಶ್, ಮುಖಂಡರಾದ ಲೋಕೇಶ್, ರಹೀಮ್, ಮಹೇಂದ್ರ, ಬಸಪ್ಪ ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

Key words: Mysore, Muda scam, CM Siddaramaiah, KS Shivaramu

Tags :

.