For the best experience, open
https://m.justkannada.in
on your mobile browser.

'ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್' ಶೈಕ್ಷಣಿಕ ರಂಗದಲ್ಲಿ  ಅಗ್ರಪಂಕ್ತಿಗೇರಲಿದೆ : ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ.

11:16 AM Apr 06, 2024 IST | mahesh
 ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್  ಶೈಕ್ಷಣಿಕ ರಂಗದಲ್ಲಿ  ಅಗ್ರಪಂಕ್ತಿಗೇರಲಿದೆ   ಶಿಕ್ಷಣ ತಜ್ಞ ಡಾ ಗುರುರಾಜ್ ಕರ್ಜಗಿ

ಮೈಸೂರು, ಏ. 06, 2024  : (www.justkannada.in news ) ಮುಂದಿನ ಒಂದೆರೆಡು ವರ್ಷದಲ್ಲಿ  'ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್' ಶೈಕ್ಷಣಿಕ ರಂಗದಲ್ಲಿ  ಅಗ್ರಪಂಕ್ತಿ ಅಲಂಕರಿಸುವ ವಿಶ್ವಾಸವಿದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ 'ಸಮಗ್ರ ಕರ್ನಾಟಕ, ಸಹೋದರ ಕರ್ನಾಟಕ' ಶೀರ್ಷಿಕೆಯಲ್ಲಿ ಆಯೋಜಿಸಿದ್ದ 'ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್' ಶಿಕ್ಷಣ ಸಂಸ್ಥೆಯ ಎರಡನೇ ವಾರ್ಷಿಕೋತ್ಸವವನ್ನು ಗಿಡಕ್ಕೆ ನೀರೆರೆ ಯವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೆಲ ವರ್ಷಗಳಲ್ಲಿ ನಂ.1:

ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ತುಂಬಾ ಸುಲಭ. ಆದರೆ ಪೂರ್ವ ಪ್ರಾಥ ಮಿಕ (ಪ್ರೀ ಪ್ರೈಮರಿ) ಮಕ್ಕಳಿಗೆ ಕಲಿಸು ವುದು ಸವಾಲಿನ ಕೆಲಸ. 'ನಿದ್ದೆ ಮಾಡು ವಾಗ ಏಕೆ ಕಣ್ಣು ಮುಚ್ಚಬೇಕು' ಎನ್ನುವಂತಹ ಮಕ್ಕಳ ಪ್ರಶ್ನೆಗಳಿಗೆ ವೈಜ್ಞಾನಿಕ ನೆಲೆಗಟ್ಟಿನ ಹೊರತಾಗಿ ಅರ್ಥ ಆಗುವ ರೀತಿ ಉತ್ತರಿಸಬೇಕು.

'ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರ ತಳೆದ ಪುಷ್ಪ ಎಂಬ ಡಿವಿಜಿ ಅವರ ಸಾಲಿನಂತೆ ಪುಸ್ತಕಕ್ಕಿಂತ ಮಸ್ತಕದ ಅರಿವು ಶಾಶ್ವತ ಈ ನಿಟ್ಟಿನಲ್ಲಿ ನೈಪುಣ್ಯಶಾಲೆಯಲ್ಲಿ ಬಿತ್ತನೆ ಮಾಡಿ, ಬೆಳೆಯು ವುದನ್ನು ಪ್ರಾಯೋಗಿಕವಾಗಿ ಕಲಿಸಿರುವು ದನ್ನು ತಿಳಿದು ಖುಷಿ ಆಯಿತು. ಸಲಹಾ ಸಮಿತಿ ಸದಸ್ಯನಾಗಿ ಈ ಶಾಲೆಯ ಜೊತೆಗಿರಲು ಸಂತೋಷವಾಗುತ್ತಿದೆ. 2- 3 ವರ್ಷದಲ್ಲಿ ಈ ಶಾಲೆ ಅಗ್ರಪಂಕ್ತಿ ಅಲಂಕರಿಸುವ ವಿಶ್ವಾಸವಿದೆ ಎಂದರು.

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳನ್ನು ಚಿಕ್ಕಂದಿನಿಂದಲೇ ರೂಢಿಸಬೇಕು. ನಿಮ್ಮ ಮಗು ನಿಮಗೆ ಮಾತ್ರ ಮಗುವಲ್ಲ, ಅದುವಿಶ್ವ ಪ್ರಜೆ ಎನ್ನುವುದು ಅರಿವಿನಲ್ಲಿರಬೇಕು. ಒಳ್ಳೆಯ ಅಭ್ಯಾಸ ರೂಢಿಸಿದರೆ ಮಹಾನ್ ವ್ಯಕ್ತಿಗಳಾಗುತ್ತಾರೆ. ಸರಿಯಾಗಿ ಬೆಳೆಸದಿದ್ದರೆ ಚಾರ್ಲ್ಸ್ ಶೋಭರಾಜ್ ನಂತಹ ಕುಖ್ಯಾತ ಅಪರಾಧಿಯೂ ಆಗಬಹುದು. ಆತ ಚಿಕ್ಕ ವಯಸ್ಸಿನಲ್ಲಿ ಎರಡು ಕೇಕ್ ಕದ್ದಾಗ ಆತನ ತಾಯಿ ಪೆಟ್ಟು ನೀಡಿ ತಿದ್ದಬೇಕಿತ್ತು. ಹಾಗೆ ಮಾಡದೆ ಬರೀ ಎರಡೇ ತಂದಿದ್ದೀಯಾ, ನಾಲೈದು ತರಬಾರದಿತ್ತೇ ಎಂದು ಹೇಳಿದ್ದು, ಆತನದುಷ್ಕೃತ್ಯಕ್ಕೆ ಪ್ರೋತ್ಸಾಹ ಸಿಕ್ಕಂತಾಯ್ತು ಎಂದು ಎಚ್ಚರಿಸಿದರು. ಪ್ರತಿಯೊಂದು ಮಗುವೂ 'ವಿಶ್ವ ಪ್ರಜೆ' ಎನ್ನುವುದು ಪೋಷಕರು ಹಾಗೂ ಶಿಕ್ಷಕರ ಅರಿವಿನಲ್ಲಿರಬೇಕು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ ತಿಳಿಸಿದರು.

ಮಾತಿನ ಮೇಲೆ ನಿಗಾ ಇರಲಿ:

ದೂರ ದಿಂದ ದಣಿದು ಬಂದಿದ್ದ ಅಜ್ಜ-ಅಜ್ಜಿಯ ಬಳಿ ಓಡಿಹೋದ ಮಗು 'ತಾತ ನೀವು ಯಾವಾಗ ವಾಪಸ್ ಹೋಗುತ್ತೀರಾ' ಎಂದು ಕೇಳುತ್ತದೆ. ಇದರಿಂದ ತಕ್ಷಣಕ್ಕೆ ಬೇಸರಿಸಿಕೊಂಡ ಅಜ್ಜ-ಅಜ್ಜಿ, ಈಗ ತಾನೇ ಬಂದಿದ್ದೇವೆ, ವಾಪಸ್ ಹೋಗುವ ಮಾತೇಕೆ ಎನ್ನುತ್ತಾರೆ. ಅದಕ್ಕೆ ಮಗು 'ಹಂಗಾದರೆ ಒಂದು ತಿಂಗಳು ಕಿರಿಕಿರಿ ತಪ್ಪಿದ್ದಲ್ಲ' ಎನ್ನುತ್ತದೆ ಆದರೆ ಆ ಮಾತು ಮಗುವಿನ ಮನಸ್ಸಿ ನಿಂದ ಬಂದಿದ್ದಲ್ಲ. ಹಿಂದಿನ ರಾತ್ರಿ ಮಗುವಿನ ಅಪ್ಪ-ಅಮ್ಮನ ಜಗಳದಲ್ಲಿ ಕೇಳಿಸಿ ಕೊಂಡಿದ್ದು. ಪೋಷಕರೇ ಹೀಗಾದರೆ ಮಕ್ಕಳಿಗೆ ಒಳ್ಳೆಯದನ್ನು ಕಲಿಸುವವರು ಯಾರು?. ಮಕ್ಕಳ ಮುಂದೆ ಏನು ಮಾತನಾಡುತ್ತೇವೆ ಎನ್ನುವುದು ಬಹಳ ಮುಖ್ಯ ಎಂದರು.

ದೇವರ ನಂಬಿಕೆ ಬೇಕು:

ಮಕ್ಕಳಿಗೆ ಅನುಭವದ ಮೂಲಕ ಕಲಿಸಬೇಕು. ಆಗ ಮಾತ್ರ ಕಲಿತದ್ದು ಜೀವನವಿಡೀ ನೆನಪಿರು ತ್ತದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಅತ್ಯಗತ್ಯ. ನಾನು ಮಾಡೋ ಕೆಲಸದಿಂದ ನನಗೂ, ಪ್ರಪಂಚಕ್ಕೂ ಒಳ್ಳೆಯದಾಗ ಬೇಕೆಂಬ ಜಾಗ್ರತೆ ಇರಬೇಕು. ದೇವರಿದ್ದಾನೆ ಎಂದು ಖಂಡಿತವಾಗಿ ಹೇಳಿಕೊಡಬೇಕು. ಇದರಿಂದ ಯಶಸ್ಸು ಸಿಕ್ಕಾಗ ನಾನೇ ಮೇಲು ಎಂಬ ಅಹಂಕಾರ ಬರುವುದಿಲ್ಲ. ಹಾಗೆಯೇ ಸೋತು ಕಾಲೂರಿ ಕುಳಿತಾಗ ಮೇಲೊಂದು ಶಕ್ತಿ ಇದೆ, ಅದು ನನ್ನನ್ನು ಕಾಪಾಡುತ್ತದೆ ಎಂಬ ನಂಬಿಕೆ ಬರುತ್ತದೆ. ಪಾಠದಿಂದ ಎಲ್ಲ ವನ್ನೂ ಕಲಿಸಲು ಸಾಧ್ಯವಿಲ್ಲ. ಪೋಷಕರು ಹಾಗೂ ಶಿಕ್ಷಕರು ತಾವು ನಡೆದು ತೋರಿ ಸಬೇಕು ಎಂದು ಸಲಹೆ ನೀಡಿದರು.

ಪುಸ್ತಕ ಜ್ಞಾನ ಭಂಡಾರ :

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ ಸಂಸ್ಥಾಪಕ ಅಧ್ಯಕ್ಷ ಆರ್.ರಘು ಮಾತನಾಡಿ, ಮಕ್ಕಳ ಆಸಕ್ತಿ ವಲಯವನ್ನು ಗುರುತಿಸಿ ಅದನ್ನು ಸಕಾರಾತ್ಮಕವಾಗಿ ಬೆಳೆಸಬೇಕು. ಇದರಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಸಮಾನವಾಗಿದೆ. ಮೊಬೈಲ್ ಮಾಹಿತಿ ಕೋಶವಷ್ಟೇ. ಪುಸ್ತಕ ಜ್ಞಾನ ಭಂಡಾರ. ಮಕ್ಕಳ ಬುದ್ದಿಗೆ ಮಂಕು ಬರಿಸುವ ಸ್ಮಾರ್ಟ್ ಫೋನ್‌ಗಳನ್ನು ದೂರವಿಡಿ. ಮಕ್ಕಳು ಶ್ರೇಷ್ಠ ಗುಣಗಳನ್ನು ರೂಢಿಸಿಕೊಂಡು ಈ ದೇಶದ ಶಕ್ತಿಯಾಗಿ ಬೆಳೆಯಬೇಕು. ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಶಿಕ್ಷಣದ ಜೊತೆಗೆ ಸುಪ್ತ ಪ್ರತಿಭೆಗೆ ನೀರೆರೆದು ಪೋಷಿಸುವುದು ನಮ್ಮ ಸಂಸ್ಥೆ ಉದ್ದೇಶ ಎಂದರು.

ಸಂಸ್ಕೃತಿ ಅನಾವರಣ:

ವಾರ್ಷಿಕೋತ್ಸವದ ಸಂಭ್ರಮದ ಜೊತೆಗೆ ಸಂಸ್ಕೃತಿಯ ಅನಾ ವರಣವಾಯಿತು. ವೀರಗಾಸೆ, ಕಂಸಾಳೆ, ಕೋಲಾಟ, ಭರತನಾಟ್ಯ ಸೇರಿದಂತೆ ನಾಡಿನ ಎಲ್ಲಾ ಕಲಾಪ್ರಕಾರಗಳನ್ನೂ ಶಾಲಾ ಮಕ್ಕಳು ಕಣ್ಣಿಗೆ ಕಟ್ಟಿದರು. ನೆರೆದಿದ್ದ ಪೋಷಕರು ಹಾಗೂ ಅವರ ಸಂಬಂಧಿಕರು, ಶಿಕ್ಷಕರು ಪುಟ್ಟ ಮಕ್ಕಳ ಪ್ರತಿಭೆ ಯನ್ನು ಆಸ್ವಾದಿಸಿ, ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್, ಪ್ರಾಂಶುಪಾಲೆ ಶೋಭಿತಾ ಎಸ್.ಆರಾಧ್ಯ, ಪೂರ್ವ ಪ್ರಾಥ ಮಿಕ ವಿಭಾಗದ ಮುಖ್ಯಸ್ಥೆ ಭಾವನಾ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

key words :Mysore,  nypunya , school excellence,  annual day

ENGLISH SUMMARY : 

Educationist Dr Gururaj Karjagi expressed confidence that in the next one or two years, 'Nypunya  School of Excellence' will become a pioneer in the field of education.

He was speaking after inaugurating the second anniversary celebrations of 'Nypunya  School of Excellence' organised under the title 'Samagra Karnataka, sahodara Karnataka' at Kalamandira here on Friday.

Tags :

.