HomeBreaking NewsLatest NewsPoliticsSportsCrimeCinema

ಮೈಸೂರು ಅರಮನೆ ಸೌಂದರ್ಯ, ಅಸ್ತಿತ್ವಕ್ಕೆ ಧಕ್ಕೆ: ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಿ- ರಘು ಕೌಟಿಲ್ಯ.

03:11 PM May 08, 2024 IST | prashanth

ಮೈಸೂರು,ಮೇ,8,2024 (www.justkannada.in): ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಿ. ಮೈಸೂರು ಅರಮನೆಯ ಸೌಂದರ್ಯ  ಹಾಗೂ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ತಪ್ಪಿಸಿ ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮುಖಂಡ ಆರ್. ರಘು ಕೌಟಿಲ್ಯ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ರಘು ಕೌಟಿಲ್ಯ,  ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕೆಲವರು ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿರುವುದರಿಂದ ನೂರಾರು ಸಂಖ್ಯೆಯಲ್ಲಿ ಹಾರಿ ಬರುವ ಪಾರಿವಾಳಗಳು ಅರಮನೆಯ ಅಂದಗೆಡಲು ಹಾಗೂ ಕಟ್ಟಡಕ್ಕೆ ಅಸ್ಥಿರತೆ ಉಂಟುಮಾಡಲು ಕಾರಣವಾಗಿವೆ.ಅದರಲ್ಲೂ ನಾಲ್ವಡಿಯವರ ತಂದೆಯವರಾದ ಶ್ರೀಮನ್ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹಾಗೂ ಅದರ ಆವರಣ ಸಹ  ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತ ಗೊಂಡಿದ್ದು, ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ನಿತ್ಯವೂ ಅಪಮಾನಿಸುವಂತಾಗಿದೆ.

ಅರಮನೆಯ ಸುತ್ತ-ಮುತ್ತ ವ್ಯಾಪಾರವನ್ನಾಶ್ರಯಿಸಿರುವ ಹಾಗೂ ದೇವಸ್ಥಾನಗಳ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಅರ್ಚಕರುಗಳ ಆರೋಗ್ಯದ ಮೇಲೂ ಇದು  ದುಷ್ಪರಿಣಾಮ ಬೀರುತ್ತಿದ್ದು, ಮೈಸೂರಿನ ಹೆಮ್ಮೆ ,ವಿಶ್ವ ವಿಖ್ಯಾತಿಯ ಸುಂದರ ಅರಮನೆಯ ಆಯಾ ಕಟ್ಟಿನ ಸ್ಥಳಗಳಲ್ಲಿ ಗೂಡು ಕಟ್ಟಿಕೊಂಡಿರುವ ಪಾರಿವಾಳಗಳು ಅರಮನೆಯ ಸೌಂದರ್ಯ ಹಾಗೂ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಈ ಕೂಡಲೇ ಮೈಸೂರು ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಪಾರಿವಾಳಗಳಿಗೆ ಧಾನ್ಯ ತಂದು ಚೆಲ್ಲುವವರಿಗೆ ತಡೆಯೊಡ್ಡಿ ಅರಮನೆಯ ಸುತ್ತಳತೆಯ 2 ಕಿ.ಮೀ ವ್ಯಾಪ್ತಿಯವರೆಗೂ ಇಂಥಾ ಚಟುವಟಿಕೆಗಳಿಗೆ ಆಸ್ಪದ ನೀಡದೇ ನಿಷೇಧಿಸುವಂತೆ ಪರಂಪರೆ ಹಾಗೂ ಪರಿಸರ ಕಾಳಜಿಯ ನಾಗರೀಕರ ಪರವಾಗಿ ಒತ್ತಾಯಿಸುತ್ತೇನೆ.

ಅಲ್ಪ ವೆಚ್ಚದಲ್ಲಿ ಮಹಾನ್ ಪುಣ್ಯ ಕಟ್ಟಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿನ ಕೆಲವು ವ್ಯಕ್ತಿಗಳು ಪಾರಿವಾಳಗಳಿಗೆ ಧಾನ್ಯಗಳನ್ನು ತಂದು ಚೆಲ್ಲುತ್ತಿದ್ದು ಈ  ಹಿನ್ನೆಲೆಯಲ್ಲಿ ಕೂಡಲೇ  ಕ್ರಮ ಕೈಗೊಂಡು ಪಾರಂಪರಿಕ ಅರಮನೆಯ ಸುರಕ್ಷತೆ ಕಾಪಾಡುವಂತೆ ಮೈಸೂರಿನ ಪರಂಪರೆ ಹಾಗೂ ಪರಿಸರ ಕಾಳಜಿಯ  ನಾಗರೀಕರ ಪರವಾಗಿ  ಮನವಿ ಮಾಡುತ್ತೇನೆ. ಈ ಬಗ್ಗೆ  ಶೀಘ್ರದಲ್ಲಿ  ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾದೀತೆಂದು ಸಹ ಎಚ್ಚರಿಸ ಬಯಸುತ್ತೇನೆ ಎಂದು ಪತ್ರದಲ್ಲಿ ರಘು ಕೌಟಿಲ್ಯ ತಿಳಿಸಿದ್ದಾರೆ.

Key words: Mysore Palace, Ban,Grainl Pigeons, Raghu Kautilya

Tags :
mysore-palace-bangrainl-pigeons-raghu-kautilya
Next Article