ನ.15ಕ್ಕೆ ಅಶೋಕ ಪುರಂ ರೈಲ್ವೆ ನಿಲ್ದಾಣ ಲೋಕಾರ್ಪಣೆಗೆ ಚಿಂತನೆ: ರೈಲ್ವೆ ಅಭಿವೃದ್ಧಿ ಬಗ್ಗೆ ಸವಿವರ ನೀಡಿದ ಕೇಂದ್ರ ಸಚಿವ ಸೋಮಣ್ಣ
ಮೈಸೂರು,ಸೆಪ್ಟಂಬರ್,13,2024 (www.justkannada.in): ರೈಲ್ವೆ ಇಲಾಖೆ ಒಂದು ರೀತಿ ವಿಕಾಸದ ಇಂಜಿನ್ ಆಗಿದೆ. ನವಂಬರ್ 15 ರಂದು ಅಶೋಕ ಪುರಂ ರೈಲ್ವೆ ನಿಲ್ದಾಣವನ್ನ ಲೋಕಾರ್ಪಣೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ರೈಲ್ವೇ ಖಾತೆ ರಾಜ್ಯ ವಿ.ಸೋಮಣ್ಣ ತಿಳಿಸಿದರು.
ನಗರದ ಡಿಆರ್ ಎಂ ಕಚೇರಿಯಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳ ಜೊತೆ ಕೇಂದ್ರ ಸಚಿವ ವಿ.ಸೋಮಣ್ಣ ಅ ಸಭೆ ನಡೆಸಿ ಚರ್ಚಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯ ಮತ್ತು ದೇಶದಲ್ಲಿ ರೈಲ್ವೆ ಅಭಿವೃದ್ಧಿ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗ ನಾನು ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ರೈಲ್ವೆ ಇಲಾಖೆ ಒಂದು ರೀತಿ ವಿಕಾಸದ ಇಂಜಿನ್ ಜನ ಸಾಮಾನ್ಯರು ಓಡಾಡುವುದು ರೈಲಿನಲ್ಲೇ ಹೆಚ್ಚು. ಮೈಸೂರು ಡಿವಿಜನನ್ನು ಬೆಂಗಳೂರು ಡಿವಿಸನ್ ರೀತಿಯಲ್ಲೇ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡುತ್ತೇವೆ. ಕೇಂದ್ರ ಸರ್ಕಾರದ ಈಗಾಗಲೇ ಸಾಕಷ್ಟು ಅನುದಾನ ಕೊಟ್ಟಿದೆ ಎಂದರು.
2047 ಕ್ಕೆ ಭಾರತ ವಿಕಸಿತ ಭಾರತದ ಕನಸು ಹೊತ್ತಿರುವ ಪ್ರಧಾನಿಗಳು ಹೇಳುತ್ತಾರೆ ಭಾರತದ ಬಗ್ಗೆ ಹೊರ ರಾಷ್ಟ್ರಗಳು ಮಾತನಾಡಬೇಕು ಎಂದು. ನಾನು ಇಂದು ಮೈಸೂರು ಅರಸರಾದ ಜಯಚಾಮರಾಜೇಂದ್ರ ಒಡೆಯರ್ ನೆನೆಸಿಕೊಳ್ಳಬೇಕು. 1880 ರಲ್ಲಿ ರೈಲ್ವೆಯನ್ನ ಮೈಸೂರಿಗೆ ತಂದರು. ರಾಜ್ಯದಲ್ಲಿ ಪ್ರತಿವರ್ಷ 174 ಕಿಮೀ ಹೆಚ್ಚಳ ಆಗುತ್ತಿದೆ. ಅಮೃತ ಬಾರ್ ಯೋಜನೆಯಡಿ 15 ರೈಲ್ವೆ ನಿಲ್ದಾಣಗಳನ್ನ 2 ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಅಶೋಕ್ ಪುರಂ ರೈಲ್ವೆ ಸ್ಟೇಷನನ್ನು ಇನ್ನಷ್ಟು ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡುತ್ತೇವೆ. ನಾಗನಹಳ್ಳಿ ಮೆಮೊ ಕೋಚಿಂಗ್ ಆಗುತ್ತಿದ್ದು, ಮೆಮೋ ರೈಲುಗಳನ್ನು ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರಿಗೆ ಇದೇ ತಿಂಗಳ 27 ರಂದು ಉದ್ಘಾಟನೆ ಮಾಡಲಿದ್ದೇನೆ ಎಂದು ವಿ.ಸೋಮಣ್ಣ ತಿಳಿಸಿದರು.
ಹಾಲಿ ಸಂಸದರ ಮುಂದೆ ಮಾಜಿ ಸಂಸದರನ್ನ ಹಾಡಿ ಹೊಗಳಿದ ವಿ.ಸೋಮಣ್ಣ
ಇದೇ ವೇಳೆ ಹಾಲಿ ಸಂಸದ ಯದುವೀರ್ ಮುಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಹಾಡಿ ಹೊಗಳಿದ ವಿ.ಸೋಮಣ್ಣ, ಅಶೋಕಪುರಂ ರೈಲ್ವೆ ನಿಲ್ದಾಣ ವೀಕ್ಷಣೆ ಮಾಡಿ ಬಂದೆ. ಈಗಾಗಲೇ ಚೆನ್ನಾಗಿ ಮಾಡಿದ್ದಾರೆ. ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೊಡುಗೆ ಅಪಾರವಾದದ್ದು ಎಂದರು.
ನವಂಬರ್15 ರಂದು ಅಶೋಕ ಪುರಂ ರೈಲ್ವೆ ನಿಲ್ದಾಣವನ್ನ ಲೋಕಾರ್ಪಣೆ ಮಾಡಲು ಚಿಂತನೆ ಮಾಡಲಾಗಿದೆ. ಎಜ್ಜಾಲ ಚಾಮರಾಜನಗರ ರೈಲ್ವೆ ಯೋಜನೆ ಕೂಡ 142 ಕಿ.ಮೀ ಯೋಜನೆ ಪ್ರಗತಿಯಲ್ಲಿದೆ. ಈಗಾಗಲೇ ಚಾಮರಾಜನಗರ ಬೆಂಗಳೂರು ರೈಲ್ವೆ ಯೋಜನೆ ಕೆಲವೇ ದಿನಗಳಲ್ಲಿ ಯೋಜನೆ ಆರಂಭವಾಗುತ್ತದೆ. ವಂದೇ ಭಾರತ್ ರೈಲು ಕರ್ನಾಟಕದಲ್ಲಿ 9 ರೈಲು ಓಡಾಡುತ್ತಿವೆ. ಇದೇ ತಿಂಗಳ 16 ರಂದು ಒಟ್ಟು13 ವಂದೇ ಭಾರತ್ ಟ್ರೈನ್ ಗಳ ಲೋಕಾರ್ಪಣೆ ಮಾಡುತ್ತಿದ್ದಾರೆ. ಏಕಕಾಲದಲ್ಲಿ ಪ್ರಧಾನಿಗಳು ಲೋಕಾರ್ಪಣೆ ಮಾಡುತ್ತಾರೆ ಎಂದು ವಿ.ಸೋಮಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ ದೇವೇಗೌಡ, ತನ್ವೀರ್ ಸೇಠ್, ಶ್ರೀವತ್ಸ ಮತ್ತು ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು.
Key words: mysore, Union Minister, V.Somanna, development, railways