For the best experience, open
https://m.justkannada.in
on your mobile browser.

Mysore University: ನೇಮಕಾತಿಯಲ್ಲಿ ಅಕ್ರಮ, ವಿಸಿ, ರಿಜಿಸ್ಟ್ರಾರ್ ವಿರುದ್ದ ಕ್ರಮಕ್ಕೆ ಆದೇಶ

02:31 PM Nov 03, 2023 IST | thinkbigh
mysore university  ನೇಮಕಾತಿಯಲ್ಲಿ ಅಕ್ರಮ  ವಿಸಿ  ರಿಜಿಸ್ಟ್ರಾರ್ ವಿರುದ್ದ ಕ್ರಮಕ್ಕೆ ಆದೇಶ

ಮೈಸೂರು, ನವೆಂಬರ್ 03, 2023 (www.justkannada.in): ಮೈಸೂರು ವಿಶ್ವವಿದ್ಯಾಲಯದಲ್ಲಿ 2006-07ನೇ ಸಾಲಿನ ಉಪನ್ಯಾಸಕರು, ರೀಡರ್ಸ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಯುಜಿಸಿ ನಿಯಾಮವಳಿಗಳ ಉಲ್ಲಂಘನೆ ಸಂಬಂಧ ಅಂದಿನ ಕುಲಪತಿ, ರಿಜಿಸ್ಟ್ರಾರ್ ಹಾಗೂ ಹಣಕಾಸು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜತೆಗೆ ಕಾನೂನು ಹಾಗೂ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು ಮೈಸೂರು ವಿವಿ ಕುಲಪತಿ ಹಾಗೂ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದ್ದಾರೆ.

2006-07ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರು, ರೀಡರ್ಸ್ ಮತ್ತು ಪ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಉಲ್ಲಂಘನೆ ಮತ್ತು ಯುಜಿಸಿ ನಿಯಮಾವಳಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಮೇಗೌಡ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ ವರದಿಯನುಸಾರ ರಾಜ್ಯಪಾಲರ ಸೂಚನೆಯಂತೆ ಅಗತ್ಯ ಕ್ರಮ ವಹಿಸಬೇಕು. ಜತೆಗೆ ಮುಂಬರುವ ನೇಮಕಾತಿ ಪ್ರಕ್ರಿಯೆಯಲ್ಲಿ ಅಗತ್ಯ ಕ್ರಮವಹಿಸುವಂತೆ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯ-1) ಅಧೀನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಈ ಕುರಿತು ಅತೀ ತುರ್ತಾಗಿ ಕ್ರಮವಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಎಲ್ಲಾ ನೇಮಕಾತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಕಾನೂನು ಇಲಾಖೆ ನಿರ್ದೇಶನ, ಗೌರವಾನ್ವಿತ ಸುಪ್ರೀಂ ಕೋರ್ಟ್, ಕರ್ನಾಟಕ UGC AICTE, KSU ಕಾಯಿದೆ ಮತ್ತು ಕಾನೂನುಗಳು ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮತ್ತು ಲೋಪಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲು ಮತ್ತು ಈ ಪ್ರಕರಣದಲ್ಲಿ 2006 ಮತ್ತು 2007 ರ ಅವಧಿಯಲ್ಲಿ ಕೆಲಸ ಮಾಡಿದ ಸಂಬಂಧಿತ ಕುಲಪತಿ, ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸಮಿತಿಯು ಮಾಡಿದ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯ-1) ಅಧೀನ ಕಾರ್ಯದರ್ಶಿ ಶೀತಲ್ ಎಂ ಹೀರೇಮಠ್ ನಿರ್ದೇಶನ ನೀಡಿದ್ದಾರೆ.

Tags :

.