2ನೇ ಬಾರಿ ಸಿಎಂ ಆಗಿದ್ದಕ್ಕೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ: ಹೀಗಾಗಿ ಇಲ್ಲಸಲ್ಲದ ಆರೋಪ- ಸಿಎಂ ಸಿದ್ದರಾಮಯ್ಯ
ಮೈಸೂರು,ಜುಲೈ,11,2024 (www.justkannada.in): ಒಬ್ಬ ಹಿಂದುಳಿದ ವರ್ಗದ ಸಿದ್ದರಾಮಯ್ಯ2ನೇ ಬಾರಿ ಸಿಎಂ ಆಗಿದ್ದಕ್ಕೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಪತ್ನಿಗೆ ಸೈಟ್ ನೀಡಿರುವ ವಿಚಾರ ಹಗರಣವೇ ಅಲ್ಲ. ನನ್ನ ಪತ್ನಿಗೆ ಪರಿಹಾರದ ಸೈಟ್ ಕೊಟ್ಟಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಅವರು ನನ್ನನ್ನು ಕೇಳಿ ಸೈಟ್ ಕೊಟ್ಟಿದ್ದಾರಾ. ಅವತ್ತು ನಾನು ವಿರೋಧ ಪಕ್ಷದ ನಾಯಕ. ನಾನೇನು ಇವತ್ತಿನ ವಿರೋಧ ಪಕ್ಷದ ನಾಯಕನ ಕೇಳಿ ಕೆಲಸ ಮಾಡುತ್ತೀನಾ. ಮುಡಾದವರು ತಪ್ಪು ಮಾಡಿ ನಂತರ ನಮಗೆ ಪರಿಹಾರದ ಸೈಟ್ ಕೊಟ್ಟಿದ್ದಾರೆ. ಭೂಮಿ ಕಳೆದುಕೊಂಡ ನಾವು ಪರಿಹಾರ ಪಡೆಯಬೇಕಾ ಬೇಡ್ವಾ? ನಾನು ಹೇಳಿದ್ದು ಈಗಲೂ ಅವರು ಕೊಟ್ಟಿರುವ ಸೈಟ್ ಅನ್ನ ವಾಪಸ್ ಪಡೆಯಲಿ. ಲೆಕ್ಕದ ಪ್ರಕಾರ 62 ಕೋಟಿ ನಮಗೆ ಪಾವತಿಸಲಿ. ಇದರಲ್ಲಿ ತಪ್ಪೇನಿದೆ. ಸೈಟ್ ಹಂಚಿಕೆ ವಿಚಾರದಲ್ಲಿ ಯಾವ ಹಂತದಲ್ಲೂ ಅಕ್ರಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಒಬ್ಬ ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರೆಡನೇ ಬಾರಿ ಸಿಎಂ ಆಗಿದ್ದನ್ನ ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನು ಇಲ್ಲ. ಹೀಗಾಗಿ ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನ ಅಕ್ರಮ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಇದೆಕ್ಕೆಲ್ಲಾ ನಾನು ಹೆದರುತ್ತೀನಾ. ಇದರಿಂದ ನನ್ನನ್ನು ಹೆದರಿಸಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಡಾ ಗಬ್ಬೆದ್ದು ಹೋಗಿದೆ. ಅದನ್ನ ಕ್ಲೀನ್ ಮಾಡುವ ಕೆಲಸ ಮಾಡುತ್ತೇನೆ. ಮುಡಾ ಹಗರಣರ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ. ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನ ಸರಿಪಡಿಸುತ್ತೇನೆ. ನಮ್ಮ ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರ ಇಟ್ಟುಕೊಂಡು ಬೇರೆ ಅಕ್ರಮ ಮಾಡಲು ಸಾಧ್ಯವಿಲ್ಲ. ನಮ್ಮದು ಅಕ್ರಮವೇ ಅಲ್ಲ. ಆ ಪ್ರಕರಣವೇ ಬೇರೆ, ಈಗ ನಡೆದಿರುವ ಪ್ರಕರಣಗಳೇ ಬೇರೆ ಎಂದರು.
ಮುಡಾ ಹಗರಣ ವಿಚಾರದ ಬಗ್ಗೆ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವರು ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡುವುದಾದರೇ ನಾವು ರಾಜಕೀಯವಾಗಿ ಎದರಿಸುತ್ತೇನೆ, ನೋಡ್ತಾ ಇರಿ. ರಾಜಕೀಯವಾಗಿ ಅದಕ್ಕೆ ಉತ್ತರ ಕೊಡುತ್ತೇನೆ ಎಂದರು.
ವರದಿ ಬಂದಿದೆ ಎಂದು ಹೇಳಿದ್ದಕ್ಕೆ ಸಿಎಂ ಕೆಂಡಾಮಂಡಲ.
ವಾಲ್ಮೀಕಿ ನಿಗಮದ ಹಗರಣ , ಸರ್ಕಾರಿ ಖಜಾನೆಯಿಂದಲೇ 187 ಕೋಟಿ ಹಣ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇನ್ನೂ ಅಧಿಕೃತವಾದ ಯಾವ ವರದಿ ಬಂದಿಲ್ಲ. ವರದಿ ನನಗೆ ಬಂದಿಲ್ಲ ಎನ್ನುವುದಾದರೇ ಮಾಧ್ಯಮದವರು ತೋರಿಸುವ ವರದಿಯ ಪ್ರತಿಯನ್ನ ಹೇಗೆ ನಂಬಲಿ. ವರದಿ ಬಂದಿದೆ ಎಂದು ಹೇಳಿದ್ದಕ್ಕೆ ಕೆಂಡಾಮಂಡಲರಾದರು.
ಖಜಾನೆಯಿಂದ ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರ ನನ್ನ ಗಮನಕ್ಕೆ ಬರುವುದಿಲ್ಲ. ವಾಲ್ಮೀಕಿ ಹಗರಣ ವಿಚಾರದಲ್ಲಿ ಮೂರು ಹಂತದಲ್ಲಿ ತನಿಖೆಯಾಗುತ್ತಿದೆ. ವರದಿಗಳು ಮೊದಲು ಬರಲಿ. ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಲ್ಲವೂ ತನಿಖಾ ಹಂತದಲ್ಲೇ ಇದೆ ಎಂದರು.
Key words: mysore,CM Siddaramaiah, MUDA scam