ನಾಗಮಂಗಲ ಗಲಭೆ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ- ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಸೆಪ್ಟಂಬರ್,12,2024 (www.justkannada.in): ಮಂಡ್ಯ ಜಿಲ್ಲೆ ನಾಗಮಂಗದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ ಎಂದಿದ್ದಾರೆ.
ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಾಗೆಯೇ ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
Key words: Nagamangala riots , CM, Siddaramaiah, action